Flyover collapses: ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕುಸಿದು ಕ್ರೇನ್ ಆಪರೇಟರ್ ಸಾವು!
ದೆಹಲಿಯ ಎನ್ಎಚ್-48ರ ಸಮಲ್ಖಾ ಬಳಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಒಂದು ಭಾಗವು ಬುಧವಾರ ಬೆಳಿಗ್ಗೆ ಕುಸಿದು ಬಿದ್ದ ಪರಿಣಾಮ ಕ್ರೇನ್ ಆಪರೇಟರ್ ಪ್ರಾಣವನ್ನು ಕಳೆದುಕೊಂಡಿದ್ದಾನೆ.
ನವದೆಹಲಿ: ನೈಋತ್ಯ ದೆಹಲಿಯ ರಾಷ್ಟ್ರೀಯ ಹೆದ್ದಾರಿ-48ರ ಬಳಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯ ಒಂದು ಭಾಗ ಕುಸಿದು ಬಿದ್ದು ಕ್ರೇನ್ ನಿರ್ವಾಹಕರೊಬ್ಬರು ಬುಧವಾರ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯು ದ್ವಾರಕಾ ಎಕ್ಸ್ಪ್ರೆಸ್ವೇಗೆ ಸಂಪರ್ಕಿಸಲಿದೆ.
ಪೊಲೀಸರು ಹೇಳಿದ್ದೇನು?: ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ಸಿ ಪ್ರಕಾರ, ನೈಋತ್ಯ ದೆಹಲಿಯ ರಾಷ್ಟ್ರೀಯ ಹೆದ್ದಾರಿ-48ರ ಸಮಲ್ಖಾ ಬಳಿಯ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯ ಒಂದು ಭಾಗ ಕುಸಿದು ಬಿದ್ದು ಕ್ರೇನ್ ನಿರ್ವಾಹಕರ ಗಾಯಗೊಂಡಿದ್ದನು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಕೂಡ ಬದುಕುಳಿದಿಲ್ಲ.
ಕಳೆದ ತಿಂಗಳು, ಪೂರ್ವ ದೆಹಲಿಯ ಬಾರಾಪುಲ್ಲಾ-ನೋಯ್ಡಾ ಲಿಂಕ್ ರೋಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯಿಂದ ಕಾರು ಬಿದ್ದು 42 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಮೇ 26 ರಂದು ರಾತ್ರಿ 8.30ರ ಸುಮಾರಿಗೆ ಈ ಮಾರಣಾಂತಿಕ ಅಪಘಾತ ಸಂಭವಿಸಿತ್ತು. ಸಿಂಗ್ ಆ ಸಮಯದಲ್ಲಿ ನೋಯ್ಡಾದಲ್ಲಿ ಕೆಲಸದಿಂದ ದೆಹಲಿಯ ಕೃಷ್ಣ ನಗರದಲ್ಲಿರುವ ತಮ್ಮ ಮನೆಗೆ ಮರಳುತ್ತಿದ್ದರು.
ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ತಾಯಿ- ಮಗ ಸಾವು: ಕೊಪ್ಪಳ ತಾಲೂಕಿನ ಮಂಗಳಪುರ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ಬೈಕೊಂದು ಡಿಕ್ಕಿ ಹೊಡೆದಿದ್ದರಿಂದ ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ಜರುಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದ ಪುಟ್ಟರಾಜು ವಸ್ತ್ರದ (46) ಮತ್ತು ಗಂಗಮ್ಮ ವಸ್ತ್ರದ(70) ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಮೃತರು ಗಜೇಂದ್ರಗಡದಿಂದ ಕೊಪ್ಪಳ ಮಾರ್ಗದ ಮೂಲಕ ಹೊಸಪೇಟೆಗೆ ಬೈಕ್ನಲ್ಲಿ ಹೊರಟಿದ್ದರು. ತಾಲೂಕಿನ ಮಂಗಳಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ಹತ್ತಿರ ನಿಂತಿರುವ ಲಾರಿಗೆ ದ್ವಿಚಕ್ರ ವಾಹನವು ಗುದ್ದಿದೆ. ಈ ವೇಳೆ ಇಬ್ಬರ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಅಪಘಾತ: ಮೈಸೂರು-ಹುಣಸೂರು ಹೆದ್ದಾರಿಯ ಬನ್ನಿಕುಪ್ಪೆ ಹತ್ತಿರ ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಜರುಗಿದೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಪಂ ಸದಸ್ಯ ಲೇ.ಚಿಕ್ಕೇಗೌಡರ ಪುತ್ರ ಭಾಸ್ಕರ್(42) ಮೃತಪಟ್ಟವರು ಎಂದು ಗುರತಿಸಲಾಗಿದೆ. ಅವರ ಪತ್ನಿ ರಮ್ಯ, ತಾಯಿ ಸಾವಿತ್ರಮ್ಮ ಹಾಗೂ ಪುತ್ರ ಚರಿತ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸದ್ಯ ಮೈಸೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾಸ್ಕರ್ ಕಾರಿನಲ್ಲಿ ತಮ್ಮ ಕುಟುಂಬ ಸಮೇತರಾಗಿ ಮಾವನ ಮನೆಗೆ ಹೋಗಿ ವಾಪಸ್ ಬರುತ್ತಿದ್ದರು. ಈ ಸಂದರ್ಭದಲ್ಲಿ ಬನ್ನಿಕುಪ್ಪೆ ಹತ್ತಿರ ಕೆಎಸ್ಆರ್ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.