ಹುಬ್ಬಳ್ಳಿ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಈ ಕುರಿತು ಪ್ರಧಾನಿ ಅವರು ಮೌನ ಮುರಿದು ಹಿಂದೂಗಳ ರಕ್ಷಣೆ ಮಾಡಿ ಬಾಂಗ್ಲಾ ನುಸುಳುಕೋರರನ್ನು ದೇಶದಿಂದ ಹೊರ ಹಾಕಲಿ ಎಂದು ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಮೀಸಲಾತಿ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು, ಈ ಘಟನೆಯಲ್ಲಿ ಬಾಂಗ್ಲಾದೇಶದಲ್ಲಿ ನೆಲೆಸಿರುವ ಹಿಂದೂಗಳ ಟಾರ್ಗೆಟ್ ಮಾಡಿ ಹಿಂಸಿಸುವ ಕೃತ್ಯ ನಡೆಯುತ್ತಿದೆ. ಈಗಾಗಲೇ ಇಸ್ಕಾನ್ ಸೇರಿದಂತೆ ಪ್ರಮುಖ ಹಿಂದೂ ದೇವಸ್ಥಾನಗಳು, ಅಂಗಡಿ, ಮನೆಗಳನ್ನು ಹಾಗೂ ರವೀಂದ್ರನಾಥ ಠಾಗೋರ್ ಅವರ ಪ್ರತಿಮೆಯನ್ನು ಧ್ವಂಸ ಮಾಡಿ, ಹಲವು ಹಿಂದೂ ಮಹಿಳೆಯರ ಅತ್ಯಾಚಾರ ಮಾಡಲಾಗುತ್ತಿದೆ,ಇದಕ್ಕೆಲ್ಲ ಮೂಲ ಇಸ್ಲಾಂ ಪ್ರವೃತ್ತಿ ಕಾರಣವಾಗಿದೆ. ಇದನ್ನು ಕೇಂದ್ರ ಸರ್ಕಾರ ಖಂಡಿಸಬೇಕಿದೆ ಎಂದರು.
ಭಾರತ ಅಲ್ಲಿನ ಜನರಿಗೆ ಉಪಕಾರ ನೀಡಿದರೂ ಅಲ್ಲಿನ ಜನರಿಗೆ ಅರಿವಿಲ್ಲ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಅಷ್ಟೊಂದು ದೌರ್ಜನ್ಯ ನಡೆಯುತ್ತಿದ್ದರೂ, ಪ್ರಧಾನಿಗಳಿಗೆ ಕಾಣುತ್ತಿಲ್ಲ. ಮೋದಿಯವರೇ ಮನಮೋಹನ್ ಸಿಂಗ್ ಅವರಂತೆ ಮೌನವಾಗಬೇಡಿ, ಇಸ್ರೇಲ್ ಮಾದರಿಯಲ್ಲಿ ಬಾಂಗ್ಲಾದೇಶ ಒಳಹೊಕ್ಕು ಹಿಂದೂಗಳ ರಕ್ಷಣೆಗೆ ಪ್ರಧಾನಿ ಮುಂದಾಗಬೇಕು ಎಂದರು.
ಕರ್ನಾಟಕದಲ್ಲಿ ೧೦ ಲಕ್ಷಕ್ಕೂ ಹೆಚ್ಚು ಅಕ್ರಮವಾಗಿ ಬಾಂಗ್ಲಾ ನುಸುಳುಕೋರರು ಆಶ್ರಯ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದ್ದು, ಇವರ ವಿರುದ್ಧ ಕ್ರಮವನ್ನು ರಾಜ್ಯದ ಗೃಹ ಸಚಿವರು ಸುಮ್ಮನೇ ಕುಳಿತಿರುವುದು ಸರಿಯಲ್ಲ. ಉಭಯ ರಾಷ್ಟ್ರೀಯ ಪಕ್ಷಗಳು ಇಂತಹ ಅಕ್ರಮ ನುಸುಳುಕೋರರನ್ನು ಓಟ್ ಬ್ಯಾಂಕ್ ಗಾಗಿ ಆಶ್ರಯ ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಇಂತವರ ವಿರುದ್ಧ ಶ್ರೀರಾಮಸೇನೆ ವತಿಯಿಂದ ರಾಜ್ಯದಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರ ನೇತೃತ್ವದಲ್ಲಿ ೫ ಜನರು ಸಮಿತಿಯೊಂದನ್ನು ರಚೆನೆ ಮಾಡಿ, ರಾಜ್ಯದಲ್ಲಿ ಅಕ್ರಮವಾಗಿ ಎಲ್ಲಲ್ಲಿ ನುಸುಳುಕೋರರು ನೆಲೆಸಿದ್ದಾರೆ ಎಂಬ ವರದಿಯನ್ನು ಸಿದ್ದಪಡಿಸಿ, ಶೀಘ್ರದಲ್ಲೇ ಸರ್ಕಾರಕ್ಕೆ ಸಂಬಂಧಿಸಿದ ಸಚಿವರಿಗೆ ವರದಿ ನೀಡಲಾಗುವುದು ಎಂದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ, ಅಗಷ್ಟ್ ೧೨ ರಂದು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರಿಗೆ ಎಚ್ಚರಿಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.