ನವದೆಹಲಿ : ದೆಹಲಿ ಗದ್ದುಗೆಯನ್ನು ಏರೋದ್ಯಾರು? 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಅರಳುತ್ತಾ? ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಗೆಲುವು ಬಾರಿಸುತ್ತಾ? ಕಾಂಗ್ರೆಸ್ ಪಕ್ಷ ಡಾರ್ಕ್ ಹಾರ್ಸ್ ರೀತಿ ಹೊರಹೊಮ್ಮುತ್ತಾ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.
ಬೆಳಗ್ಗೆಯಿಂದ ಮತ ಎಣಿಕೆ ಶುರುವಾಗಲಿದ್ದು, ಮಧ್ಯಾಹ್ನ ಹೊತ್ತಿಗೆ ಯಾವ ಪಕ್ಷಕ್ಕೆ ಅಧಿಕಾರ ಎನ್ನುವುದು ಬಹುತೇಕ ಗೊತ್ತಾಗಲಿದೆ. ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ 60.42% ರಷ್ಟು ಮತದಾನ ನಡೆದಿತ್ತು. ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ.
699 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರ ಸೇರಿತ್ತು. ಬಹುತೇಕ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿಗೆ ಅಧಿಕಾರ ದಕ್ಕಲಿದೆ ಎಂದು ಹೇಳಿವೆ. ಈ ಸಮೀಕ್ಷೆಗಳನ್ನು ಒಪ್ಪದ ಆಮ್ ಆದ್ಮಿ ಪಕ್ಷ ಬಿಜೆಪಿ ವಿರುದ್ಧವೇ ಆಪರೇಷನ್ ಕಮಲದ ಆರೋಪ ಮಾಡಿದೆ.
2013 ರ ಚುನಾವಣೆಯಲ್ಲಿ ಬಿಜೆಪಿ 31, ಆಪ್ 28, ಕಾಂಗ್ರೆಸ್ 08 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಇತರರು ಮೂರು ಸ್ಥಾನ ಗೆದ್ದಿದ್ದರು. ಆಪ್ಗೆ ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ ಕೇಜ್ರಿವಾಲ್ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.
ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ ಘೋಷಿಸಿದೆ. ಒಂದಿಷ್ಟು ಸೀಟ್ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.