ಕೋಲಾರ : ಜಿಲ್ಲೆಯ ಗಡಿಯಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಕಾಡಾನೆ ಹಿಂಡು ದಾಳಿಯಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ಇದ್ದು, ಭಯದಲ್ಲೆ ಜೀವನ ನಡೆಸುವ ಸ್ಥಿತಿ ಬಂದಿದೆ. ಕಳೆದೊಂದು ವಾರದಿಂದ ಕಾಡಂಚಿನ ಗ್ರಾಮಗಳ ರೈತರ ಜಮೀನುಗಳಿಗೆ ದಾಳಿ ಮಾಡಿರುವ ಕಾಡಾನೆಗಳ ಹಿಂಡು ರೈತರು ಬೆಳೆದ ಅಪಾರ ಪ್ರಮಾಣದ ಟೊಮ್ಯಾಟೊ, ರಾಗಿ, ಭತ್ತ, ಬಾಳೆ ಎಲ್ಲವನ್ನು ನಾಶ ಮಾಡಿವೆ. ಇದರಿಂದ ರೈತರು ಕಂಗೆಟ್ಟಿದ್ದಾರೆ.
ತಾಲೂಕಿನ ಕಾಡಂಚಿನ ಗ್ರಾಮಗಳಾದ ಭತ್ತಲಹಳ್ಳಿ, ತಳೂರು ಮತ್ತು ಸಾಕರಸನಹಳ್ಳಿ ಗ್ರಾಮಗಳಲ್ಲಿ ಬೆಳೆ ನಾಶವಾಗಿದೆ. ಭತ್ತಲಹಳ್ಳಿ ಗ್ರಾಮದ ಸುಬ್ರಮಣಿ, ತಳೂರು ಗ್ರಾಮದ ವೆಂಕಟೇಶ್, ಸಾಕರಸನಹಳ್ಳಿ ಗ್ರಾಮದ ಮಂಜುನಾಥ್ ಎಂಬವರ ರೈತರ ಬೆಳೆಗಳು ನಾಶವಾಗಿವೆ.
ಇನ್ನೂ ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಿಂಡು ಪದೇಪದೆ ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಲೇ ಇವೆ. 3 ಕಿ.ಮೀ ಸೋಲಾರ್ ಫೆನ್ಸಿಂಗ್ ಅಳವಡಿಕೆ ಮಾಡದ ಕಾರಣ ಕಾಡಾನೆಗಳ ಹಿಂಡು ಪದೇ ಪದೇ ರೈತರ ಜಮೀನುಗಳಿಗೆ ಈ ಭಾಗದಲ್ಲಿ ಲಗ್ಗೆ ಇಡುತ್ತಿವೆ ಅನ್ನೋದು ರೈತರ ಆರೋಪವಾಗಿದೆ.