ತಿರುಪತಿ : ತಿರುಪತಿಯಲ್ಲಿನ ಕಾಲ್ತುಳಿತ ಘಟನೆಗೆ ಕ್ಷಮೆ ಕೋರುವುದರಿಂದ ಸತ್ತವರು ಬದುಕಿ ಬರಲ್ಲ ಎಂದು ಆಂಧ್ರ ಪ್ರದೇಶದ ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತಹ ಹೇಳಿಕೆಯನ್ನು ತಿರುಮಲ ತಿರುಪತಿ ದೇವಸ್ಥಾನಂ ಮುಖ್ಯಸ್ಥ ಬಿ.ಆರ್. ನಾಯ್ಡು ಶುಕ್ರವಾರ ನೀಡಿದ್ದಾರೆ.
ಜ.8 ರಂದು ವಿಶೇಷ ದರ್ಶನದ ಟಿಕೆಟ್ ವಿತರಣೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಆರು ಮಂದಿ ಸಾವನ್ನಪ್ಪಿದ್ದರೆ, ಹಲವು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಗೆ ಕ್ಷಮೆ ಕೋರಬೇಕು ಎಂದು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸಲಹೆ ನೀಡಿದ್ದರು.
ಈ ಸಲಹೆಗೆ ತಿರುಗೇಟು ನೀಡಿರುವ ಬಿ. ಆರ್. ನಾಯ್ಡು, ಕ್ಷಮೆ ಕೋರುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಕ್ಷಮೆಯು ಸತ್ತವರನ್ನು ಬದುಕಿಸುವುದಿಲ್ಲ. ಯಾರೋ ಏನೋ ಹೇಳುತ್ತಾರೆ ಅಂತಾ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಈ ಕಾಲ್ತುಳಿತ ಘಟನೆಯಲ್ಲಿ ತಪ್ಪಿಲ್ಲದಿದ್ದರೂ ಟಿಟಿಡಿ ಮಂಡಳಿ ಸದಸ್ಯರು ಭಕ್ತರ ಕ್ಷಮೆಯಾಚಿಸಿದ್ದಾರೆ. ಏನೋ ತಪ್ಪಾಗಿದೆ. ಹೇಗೆ ಕಾಲ್ತುಳಿತ ಸಂಭವಿಸಿತು. ಅದಕ್ಕೆ ಯಾರದು ತಪ್ಪು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗುರುವಾರ ತಿರುಪತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪವನ್ ಕಲ್ಯಾಣ್, ಟಿಟಿಡಿ ಮುಖ್ಯಸ್ಥ ಬಿ.ಆರ್. ನಾಯ್ಡು, ಮಂಡಳಿ ಸದಸ್ಯರು, ಎಕ್ಸಿಕ್ಯೂಟಿವ್ ಆಫೀಸರ್ ಜೆ. ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಎಕ್ಸಿಕ್ಯೂಟಿವ್ ಆಫೀಸರ್ ಕಾಲ್ತುಳಿತ ಸಂತ್ರಸ್ತರ ಕ್ಷಮೆ ಕೋರುವುದು ಬಿಟ್ಟರೇ ಬೇರೆ ಆಯ್ಕೆಗಳಿಲ್ಲ ಎಂದು ಹೇಳಿದ್ದರು.
ಭಕ್ತರ ದಟ್ಟಣೆ ನಿಯಂತ್ರಿಸುವಲ್ಲಿ ವಿಫಲತೆ ಹಿನ್ನೆಲೆಯಲ್ಲಿ ಟಿಟಿಡಿ ಮುಖ್ಯಸ್ಥರು ಮತ್ತಿತರರು ಕಾಲ್ತುಳಿತ ಸಂತ್ರಸ್ತರು ಹಾಗೂ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಹೇಳಿದ್ದರು.