Free bus: ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಮಧ್ಯಾಹ್ನ 1 ಗಂಟೆಯಿಂದ ಮಹಿಳೆಯರಿಗೆ ಫ್ರೀ ಬಸ್ ಸೇವೆ ಜಾರಿ
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲ ‘ಶಕ್ತಿ ಯೋಜನೆ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ಕೊಟ್ಟರು.ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಬೆಂಗಳೂರು: ರಾಜ್ಯದ ಎಲ್ಲ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನಿಡುವ ‘ಶಕ್ತಿ ಯೋಜನೆ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ವಿಧಾನಸೌಧ ಮುಂಭಾಗ ಯೋಜನೆಯ ಉದ್ಘಾಟನಾ ಸಮಾರಂಭ ನಡೆಯಿತು.
ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಜಾರಿಯಾಗಿರುವ ಮೊದಲ ಯೋಜನೆ ಇದಾಗಿದೆ. ರಾಜ್ಯಾದ್ಯಂತ ಏಕಕಾಲಕ್ಕೆ ಶಕ್ತಿ ಯೋಜನೆ ಉದ್ಘಾಟನೆಗೊಂಡಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಾಸಕರು ಚಾಲನೆ ನೀಡಿದ್ದಾರೆ.
ಲೋಗೋ, ಸ್ಮಾರ್ಟ್ ಕಾರ್ಡ್ ಅನಾವರಣ: ಶಕ್ತಿ ಯೋಜನೆಯ ಲೋಗೋ ಮತ್ತು ಸ್ಮಾರ್ಟ್ ಕಾರ್ಡ್ ಮಾದರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಡುಗಡೆ ಮಾಡಿದರು. ‘ಮಹಿಳಾ ಸಬಲೀಕರಣದತ್ತ ಪ್ರಯಾಣ’ ಎಂಬ ಘೋಷ ವಾಕ್ಯದೊಂದಿಗೆ ಲೋಗೋ ಅನಾವರಣ ನಡೆಯಿತು.
ಐದು ಗ್ಯಾರಂಟಿಗಳಿಗೆ 59 ಸಾವಿರ ಕೋಟಿ ರೂ: ಸಿದ್ದರಾಮಯ್ಯ
ಮಹಿಳೆಯರು ಶತಮಾನಗಳಿಂದ ಅವಕಾಶ ವಂಚಿತರಾಗಿ ಶೋಷಣೆಗೊಳಗಾಗಿದ್ದಾರೆ. ಸಮಾಜ ಅಭಿವೃದ್ಧಿ ಪಥದತ್ತ ಸಾಗಲು ಪುರುಷರಿಗೆ ಸಮಾನವಾಗಿ ಎಲ್ಲ ಮಹಿಳೆಯರು ಪಾಲ್ಗೊಳ್ಳಬೇಕು ಎಂದು ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಕರೆ ನೀಡಿದರು. ಭಾರತದಲ್ಲಿ ಮೊದಲು ಶೇ.30 ರಷ್ಟು ಮಹಿಳೆಯರು ಸಾರ್ವಜನಿಕ ವಲಯದಲ್ಲಿ ಇದ್ದರು. ಆದರೆ 2014ರ ಬಳಿಕ ಅದು ಶೇ.30 ರಿಂದ 24ಕ್ಕೆ ಇಳಿದಿದೆ. ಮನುವಾದಿಗಳು ಬಯಸುವುದೇ ಅದು. ಬಾಗಿಲು ದಾಟಬಾರದು ಎಂಬುದು ಅವರ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದರು.
ನಾವು ಕೊಟ್ಟ ಐದು ಗ್ಯಾರಂಟಿಗಳಲ್ಲಿ ನಾಲ್ಕು ಯೋಜನೆಗಳು ಮಹಿಳೆಯರಿಗೆ ಸಿಗುವಂತದ್ದು. ಇದಕ್ಕೆ ಕೆಲವರು ಕುಹಕ ಆಡುತ್ತಾರೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅದಕ್ಕೆ ಸೊಪ್ಪು ಹಾಕಲ್ಲ. ಕುಹಕ ಮಾಡುವವರು ಅಲ್ಲೇ ಇರುತ್ತಾರೆ. ಏಕೆಂದರೆ ಅವರು ಮನುವಾದಿಗಳು. ಗೃಹ ಜ್ಯೋತಿಯನ್ನು ಗೇಲಿ ಮಾಡುತ್ತಾರೆ. ಬಿಜೆಪಿಯವರು ಎಡಬಿಡಂಗಿ ಮಾತು ಆಡುತ್ತಾರೆ. ಬಿಜೆಪಿಯವರು ತಮ್ಮ ಅವಧಿಯಲ್ಲಿ ಏನೂ ಮಾಡಿಲ್ಲ. 600 ಭರವಸೆ ಕೊಟ್ಟಿದ್ದರು. ಆದರೆ ಶೇ.10ರಷ್ಟು ಭರವಸೆಯನ್ನು ಈಡೇರಿಸಿಲ್ಲ. ಅಂತಹವರು ನಮಗೆ ಪಾಠ ಹೇಳಲು ಬರುತ್ತಿದ್ದಾರೆ. ಅದಕ್ಕೆ ಮಾಧ್ಯಮದವರು ಕೈ ಜೋಡಿಸಿದರು ಎಂದು ಕಿಡಿಕಾರಿದರು.
ಸಮಾಜದಲ್ಲಿನ ಅಶಕ್ತರಿಗೆ ಶಕ್ತಿ ಕೊಡಬೇಕು ಎಂಬುದು ನಮ್ಮ ಉದ್ದೇಶ. ಎಲ್ಲ ಜಾತಿಯ, ಧರ್ಮದ ಬಡವರಿಗೆ ಈ ಸರ್ಕಾರ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಐದೂ ಗ್ಯಾರಂಟಿಗಳಿಗೆ ಸುಮಾರು 59 ಸಾವಿರ ಕೋಟಿ ರೂ. ಬೇಕಾಗುತ್ತದೆ. ರಾಜ್ಯ ದಿವಾಳಿ ಆಗುತ್ತೆ ಎಂದು ಕೆಲವರು ಟೀಕೆ ಮಾಡುತ್ತಾರೆ. ಎಲ್ಲಾ ಗ್ಯಾರಂಟಿಗಳನ್ನು ಎಷ್ಟೇ ಕಷ್ಟ ಬಂದರೂ ಈಡೇರಿಸುತ್ತೇವೆ. ಎಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಎಂಬುದು ಮುಖ್ಯ ಅಲ್ಲ. ಯಾವ ಜನರಿಗೆ ಖರ್ಚು ಮಾಡುತ್ತಿದ್ದೇವೆ ಎಂಬುದು ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಎಪಿಎಲ್, ಬಿಪಿಎಲ್ ಎಂಬ ಷರತ್ತು ಇಲ್ಲ, ಮುಂದಿನ 10 ವರ್ಷ ಯೋಜನೆ ಇರುತ್ತೆ: ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ 20 ದಿನದಲ್ಲಿ ನುಡಿದಂತೆ ನಡೆದ ಸರ್ಕಾರವೆಂದರೆ ಅದು ಸಿದ್ದರಾಮಯ್ಯರ ಸರ್ಕಾರ. ನಮ್ಮದು ನುಡಿಯುವಂತೆ ನಡೆಯುವ ಪಕ್ಷ. ನುಡಿದಂತೆ ನಡೆಯುವ ಸರ್ಕಾರ. ಬಿಜೆಪಿ 600 ಆಶ್ವಾಸನೆ ಕೊಟ್ಟರು. ಆದರೆ ಅವರು ಈಡೇರಿಸಿದ್ದು ಕೇವಲ 60 ಮಾತ್ರ. ಬಿಜೆಪಿಗೂ ನಮಗೂ ಬಹಳ ಅಜಗಜಾಂತರ ವ್ಯತ್ಯಾಸ ಇದೆ. ಇಂದು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೇವೆ. ಇಂದಿನಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣವಿರುತ್ತದೆ. ಎಲ್ಲಾ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಉಚಿತ ಪ್ರಯಾಣಕ್ಕೆ ಬಿಪಿಎಲ್, ಎಪಿಎಲ್ ಎಂಬ ನಿಯಮವಿಲ್ಲ. ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಕೊಡುತ್ತೇವೆ. ಅಲ್ಲಿವರೆಗೆ ಸರ್ಕಾರದ ಯಾವುದೇ ಅಧಿಕೃತ ಐಡಿ ತೋರಿಸಿ ಪ್ರಯಾಣ ಮಾಡಬಹುದು. ಮಧ್ಯಾಹ್ನ 1 ಗಂಟೆ ಮೇಲೆ ಉಚಿತ ಪ್ರಯಾಣ ಮಾಡಲು ಅವಕಾಶವಿದೆ. ಶೇ.90 ಕ್ಕಿಂತ ಹೆಚ್ಚು ಬಸ್ಗಳಲ್ಲಿ ರಾಜ್ಯದ ಯಾವುದೇ ಮೂಲೆಗೆ ಮಹಿಳೆಯರು ಹೋಗಬಹುದು. ಕೆಲವರು ಈ ಯೋಜನೆಯನ್ನು ಟೀಕೆ ಮಾಡುತ್ತಾರೆ. ಈ ಕಾರ್ಯಕ್ರಮ 5 ವರ್ಷವೂ ಇರಲಿದೆ. ಬಳಿಕ ನಾವೇ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ. 10 ವರ್ಷಗಳಿಗೆ ಈ ಯೋಜನೆ ಮುಂದುವರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಎಷ್ಟು ಮಹಿಳೆಯರಿಗೆ ಅನುಕೂಲ?: ಮಧ್ಯಾಹ್ನ 1.00 ಗಂಟೆಯ ನಂತರ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಬಹುದು. ಯೋಜನೆಯಿಂದ ಪ್ರತಿದಿನ 41.8 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ. ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದ್ದು, 18,609 ಬಸ್ಗಳು ಉಚಿತ ಪ್ರಯಾಣಕ್ಕೆ ಲಭ್ಯವಿದೆ.
ರಾಜ್ಯ ಸರ್ಕಾರಿ ಸ್ವಾಮ್ಯದ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಹಾಗೂ ಎನ್ಇಕೆಆರ್ಟಿಸಿ ಬಸ್ಗಳಲ್ಲಿ ಸೌಲಭ್ಯ ಒದಗಿಸಲಾಗುತ್ತಿದೆ. ವಾರ್ಷಿಕವಾಗಿ 4051.56 ಕೋಟಿ ರೂ. ವೆಚ್ಚವಾಗುವುದು ಎಂದು ಅಂದಾಜಿಸಲಾಗಿದೆ. ಎಲ್ಲ ಮಹಿಳೆಯರು ಸೌಲಭ್ಯ ಪಡೆಯಬಹುದು. ಲಿಂಗತ್ವ ಅಲ್ಪಸಂಖ್ಯಾತರಿಗೂ ಅನುಕೂಲ ದೊರೆಯಲಿದೆ.
ಯೋಜನೆಯ ಮುಖ್ಯಾಂಶಗಳು:
- ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಯೋಜನೆ ಅನುಕೂಲ.
- ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಗಳಲ್ಲಿ ಮಾತ್ರ ಅನ್ವಯ.
- ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿನ ಬಸ್ಗಳಲ್ಲಿ ಸಂಚರಿಸಲು ಅವಕಾಶ.
- ಬೆಂಗಳೂರು ಮಹಾನಗರ ಸಾರಿಗೆ ಮತ್ತು ಇತರ ನಗರ ಸಾರಿಗೆ ಬಸ್ಗಳಿಗೂ ಅನ್ವಯ.
- ರಾಜ್ಯದೊಳಗಿನ ಪ್ರಯಾಣಕ್ಕೆ ರಾಜ್ಯದಲ್ಲಿ ವಾಸಿಸುವ ಮಹಿಳೆಯರಿಗೆ ಮಾತ್ರ ಸೀಮಿತ.
- ಶಕ್ತಿ ಸ್ಮಾರ್ಟ್ ಕಾರ್ಡ್’ಗಾಗಿ ಸೇವಾ ಸಿಂಧುವಿನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಬೇಕು
- ಮೂರು ತಿಂಗಳವರೆಗೆ ಗುರುತಿನ ಚೀಟಿ ತೋರಿಸಿ ಶೂನ್ಯ ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶ.
- ಭಾರತ / ಕರ್ನಾಟಕ ಸರ್ಕಾರ ಇಲ್ಲವೆ ಸರ್ಕಾರಿ ಸ್ವಾಮ್ಯದ ಕಚೇರಿಗಳು ನೀಡಿರುವ ಭಾವಚಿತ್ರ ಇರುವ ಐಡಿ ಕಾರ್ಡ್ ಮಾನ್ಯ ಮಾಡಲಾಗುವುದು.