Free bus: ಶಕ್ತಿ ಯೋಜನೆಯ ಮೊದಲ ದಿನವೇ ಲಕ್ಷಕ್ಕೂ ಅಧಿಕ ಮಹಿಳೆಯರ ಪ್ರಯಾಣ!

Free bus: ಶಕ್ತಿ ಯೋಜನೆಯ ಮೊದಲ ದಿನವೇ ಲಕ್ಷಕ್ಕೂ ಅಧಿಕ ಮಹಿಳೆಯರ ಪ್ರಯಾಣ!

Free bus travel scheme: NWKRTC ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಮೊದಲ ದಿನ 1.22 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ: ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ (Shakti Scheme, Free bus travel scheme) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಚಾಲನೆ ನೀಡಿದ್ದು, ಮಹಿಳೆಯರು ಫುಲ್ ಖುಷ್ ಆಗಿದ್ದಾರೆ.

ಅಷ್ಟೇ ಅಲ್ಲ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಬಸ್​​ಗಳಲ್ಲಿ ಲಕ್ಷಕ್ಕೂ ಅಧಿಕ ಮಹಿಳೆಯರು ಪ್ರಯಾಣಿಸಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ರಾಜ್ಯಾದ್ಯಂತ ಆರಂಭವಾಗಿರುವ ಸರ್ಕಾರಿ ಬಸ್​​​ನಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಮೊದಲ ದಿನ ಭಾರಿ ಪ್ರಮಾಣದಲ್ಲಿ ಮಹಿಳೆಯರು ಪ್ರಯಾಣಿಸಿರುವುದು ಮಾಹಿತಿ ಲಭ್ಯವಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಬಸ್​​​ಗಳಲ್ಲಿ 1.22 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.

ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ಭಾನುವಾರ ಜೂನ್ 11ರಂದು ಆರಂಭಿಸಲಾಗಿರುವ ಸರ್ಕಾರಿ ಬಸ್​​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರುತ್ತದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರಕನ್ನಡ ಸೇರಿದಂತೆ ಆರು ಜಿಲ್ಲೆಗಳಲ್ಲಿ ಜೂನ್ 11ರಂದು ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಒಟ್ಟು 1,22,354 ಮಹಿಳೆಯರು ಪ್ರಯಾಣಮಾಡಿದ್ದಾರೆ. ಪ್ರಯಾಣ ಮಾಡಿದ ಬಸ್ ಟಿಕೆಟ್ ದರದ ಮೊತ್ತ ರೂ. 36,17,096 ಗಳಾಗಿದೆ. ಸೋಮವಾರದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಬಹಳಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಜಿಲ್ಲಾವಾರು ಮಾಹಿತಿ ಈ ಕೆಳಗಿನಂತಿದೆ..:

ಜಿಲ್ಲೆಮಹಿಳಾ ಪ್ರಯಾಣಿಕರು
ಧಾರವಾಡ ನಗರ ಸಾರಿಗೆ12,354
ಧಾರವಾಡ ಗ್ರಮಾಂತರ11,780
ಬೆಳಗಾವಿ34,797
ಬಾಗಲಕೋಟೆ11,687
ಗದಗ11,687
ಹಾವೇರಿ16,656
ಉತ್ತರ ಕನ್ನಡ8,497

ಉಚಿತ ಪ್ರಯಾಣ ಇನ್ನೂ ಸುಲಭ: ಮಹಿಳೆಯರ ಉಚಿತ ಪ್ರಯಾಣವನ್ನು ಮತ್ತಷ್ಟು ಸುಲಭವಾಗಿಸುವ ದೃಷ್ಟಿಯಿಂದ ರಾಜ್ಯದ ವಿಳಾಸವಿರುವ ಭಾವಚಿತ್ರ ಸಹಿತ ಅಧಿಕೃತ ದಾಖಲೆಗಳ ಮೂಲ ಪ್ರತಿ, ನಕಲು, ಡಿಜಿಲಾಕರ್ (ಹಾರ್ಡ್ ಮತ್ತು ಸಾಫ್ಟ್ ಕಾಪಿ) ಮಾದರಿಯ ಗುರುತಿನ ದಾಖಲೆಗಳನ್ನು ಸಹ ಮಾನ್ಯ ಮಾಡಲು ನಿರ್ಧರಿಸಲಾಗಿದೆ. ಮಹಿಳೆಯರಿಗೆ ಪ್ರಯಾಣ ಉಚಿತ. ಆದರೆ, ಟಿಕೆಟ್ ಪಡೆಯುವುದು ಕಡ್ಡಾಯ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಬಸ್​ಗೆ ನಮಸ್ಕರಿಸಿ ಹತ್ತಿದ ತಾಯಿ: ಇನ್ನು ಯೋಜನೆ ಜಾರಿಯಾದ ಬಳಿಕ ವೃದ್ಧೆಯೊಬ್ಬರು ಮೊದಲ ಬಾರಿಗೆ ಬಸ್​ನಲ್ಲಿ ಉಚಿತವಾಗಿ ಸಂಚರಿಸುವ ಮುನ್ನ ನಮಸ್ಕರಿಸಿ ಬಸ್ ಹತ್ತಿರುವ ಚಿತ್ರ ಗಮನ ಸೆಳೆಯುತ್ತಿದೆ. ಬಸ್​ಗೆ ವೃದ್ಧೆ ನಮಸ್ಕರಿಸುವ ಚಿತ್ರವನ್ನು ಸಿಎಂ ಸಿದ್ದರಾಮಯ್ಯ ಅವರು ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಯೋಜನೆ ಜಾರಿಗೆ ಕೊಟ್ಟ ನನಗೆ ಸಂತೃಪ್ತಿ ನೀಡಿದ ಜೊತೆಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು’ ಎಂದು ಸಿಎಂ ಬರೆದುಕೊಂಡಿದ್ದರು.

ರಾಜ್ಯಾದ್ಯಂತ ಐದು ಲಕ್ಷಕ್ಕೂ ಹೆಚ್ಚ ಮಹಿಳಾ ಪ್ರಯಾಣಿಕರ ಸಂಚಾರ: ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆ ಶಕ್ತಿ ಯೋಜನೆಗೆ ಮೊದಲ ದಿನವೇ ಮಹಿಳೆಯರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ಭಾನುವಾರ ವಿಧಾನಸೌಧದಲ್ಲಿ ಚಾಲನೆ ಸಿಕ್ಕ ಶಕ್ತಿ ಗ್ಯಾರಂಟಿ ಯೋಜನೆಯನ್ನು ರಾಜ್ಯದ ಮಹಿಳೆಯರು ಖುಷಿ ಖುಷಿಯಾಗಿ ಸ್ವೀಕಾರ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಶಕ್ತಿ ಯೋಜನೆಯಡಿ ಸುಮಾರು 5 ಲಕ್ಷದ 71 ಸಾವಿರಕ್ಕೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿರುವುದಾಗಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.

Leave a Reply

Your email address will not be published. Required fields are marked *