ಅಗರ್ತಲಾ : ಗಾಂಧಿ ಕುಟುಂಬವು ಗಾಂಧಿಯೇತರ ಇತರ ಕಾಂಗ್ರೆಸ್ ನಾಯಕರಿಗೆ ಎಂದಿಗೂ ಗೌರವ ನೀಡಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಂದು ಆರೋಪಿಸಿದ್ದಾರೆ.
ಭಾರತದ ಮೊದಲ ಸಿಖ್ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನಿಗದಿತ ಸ್ಥಳದಲ್ಲಿ ನಡೆಸುವ ಬದಲು ನಿಗಮಬೋಧ ಘಾಟ್‌ನಲ್ಲಿ ನಡೆಸುವ ಮೂಲಕ ಕೇಂದ್ರ ಸರ್ಕಾರ ಅವರಿಗೆ ಅಗೌರವ ತೋರಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ ಅವರು, ಇದು ‘ದುರದೃಷ್ಟಕರ ಮತ್ತು ರಾಜಕೀಯ ಪ್ರೇರಿತ’ ಎಂದು ಹೇಳಿದರು.
‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗಿನ ನಮ್ಮ ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಅವರು ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಂಗ್ ಅವರ ಅಂತ್ಯಕ್ರಿಯೆಗೆ ಸಂಪೂರ್ಣ ಸರ್ಕಾರಿ ಗೌರವವನ್ನು ನೀಡಲು ಸಾಧ್ಯವಿರುವ ಎಲ್ಲ ಉಪಕ್ರಮಗಳನ್ನು ಕೈಗೊಂಡಿದ್ದಾರೆ’ ಎಂದು ಅವರು ತಿಳಿಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತ್ರವಲ್ಲದೆ, ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೂ ಕಾಂಗ್ರೆಸ್ ಸರಿಯಾದ ಗೌರವವನ್ನು ನೀಡಿಲ್ಲ ಎಂದು ದೂರಿದರು. ತನ್ನ ತಂದೆಯ ಮರಣದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು ನಡೆಸಿಲ್ಲ ಎಂದು ಕಾಂಗ್ರೆಸ್ ಅನ್ನು ಪ್ರಣಬ್ ಮುಖರ್ಜಿ ಅವರ ಪುತ್ರಿಯೇ ಟೀಕಿಸುತ್ತಿದ್ದಾರೆ.
ವಾಸ್ತವದಲ್ಲಿ, ಗಾಂಧಿ ಕುಟುಂಬವು ಗಾಂಧಿಯೇತರ ಕಾಂಗ್ರೆಸ್ ನಾಯಕರಿಗೆ ಎಂದಿಗೂ ಗೌರವ ನೀಡಿಲ್ಲ. ಅವರು ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್‌ಗೆ ಭಾರತ ರತ್ನ ಪ್ರಶಸ್ತಿಯನ್ನು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವವನ್ನು ಸಹ ನೀಡಿಲ್ಲ. ಈ ಎಲ್ಲದರ ಬಗ್ಗೆ ಗಾಂಧಿ ಕುಟುಂಬವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಜೋಶಿ ಒತ್ತಾಯಿಸಿದರು.