ಬೆಂಗಳೂರು : ಯುವ ನಿಧಿ ಯೋಜನೆಯಡಿಯಲ್ಲಿ ನೋಂದಣಿಗೊಂಜ ಯುವಕರಿಗೆ ಆದ್ಯತೆಯ ಮೇಲೆ ಕೌಶಲ್ಯ ತರಬೇತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು. ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

ಈ ಸಭೆಯಲ್ಲಿ ಮಾತನಾಡಿದ ಸಿಎಂ, ಯುವ ನಿಧಿ ಯೋಜನೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದು, ಇದರ ಅಡಿಯಲ್ಲಿ ಸರ್ಕಾರವು ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪಡೆದವರಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿಯಲ್ಲಿ 1,96,000 ಯುವಕರು ನೋಂದಾವಣಿ ಮಾಡಿಕೊಂಡಿದ್ದು, ಈ ವರೆಗೂ 1,61,883 ಯುವಕರಿಗೆ 216.38 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ. ಯೋಜನೆಯಡಿ ಅರ್ಹ ಅಭ್ಯರ್ಥಿಗಳ ನೋಂದಣಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರಸ್ತುತ ಬಜೆಟ್‌ನಲ್ಲಿ ಇಲಾಖೆಗೆ ರೂ.1864 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಇದುವರೆಗೆ ರೂ. 1235 ಕೋಟಿ ವೆಚ್ಚವಾಗಿದೆ. ರಾಜ್ಯದಲ್ಲಿ 50 ವರ್ಷ ಪೂರ್ಣಗೊಳಿಸಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪಾರಂಪರಿಕ ಸಂಸ್ಥೆಗಳೆಂದು ಘೋಷಿಸಿ ಉನ್ನತೀಕರಣಕ್ಕಾಗಿ ರೂ.100 ಕೋಟಿ ಒದಗಿಸಲಾಗಿದ್ದು, ಈ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಐಟಿಐ ಪ್ರವೇಶಾತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕೌಶಲ್ಯಾಭಿವೃದ್ಧಿ ಆದರೆ ಮಾತ್ರ ಉದ್ಯೋಗ ಸಿಗಲು ಸಾಧ್ಯವಿದೆ. ಕೌಶಲ್ಯ ನೀಡಿಕೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು. ಯುವನಿಧಿ ಯೋಜನೆಯಡಿ ನೋಂದಣಿಗೊಂಡವರಿಗೆ ಆದ್ಯತೆ ಮೇರೆಗೆ ಕೌಶಲ್ಯ ತರಬೇತಿ ನೀಡಬೇಕು. ಯುವನಿಧಿ ಯೋಜನೆಯಡಿ ಇದುವರೆಗೆ 1,97,060 ಅಭ್ಯರ್ಥಿಗಳು ನೋಂದಾಯಿಸಿದ್ದು, ಇವರ ಪೈಕಿ 1,61,883 ಅರ್ಹ ಫಲಾನುಭವಿಗಳಿಗೆ ರೂ.216.38 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ.

ಈ ವರ್ಷದ ಬಜೆಟ್ ನಲ್ಲಿ ಘೋಷಿಸಲಾಗಿದ್ದ, ಸುಮಾರು 20ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಮತ್ತು ಕಮ್ಯುನಿಕೇಶನ್‌ ಕೌಶಲ್ಯ ತರಬೇತಿ ನೀಡುವ ಕಾರ್ಯಕ್ರಮವನ್ನು ಆದಷ್ಟು ಬೇಗನೆ ಅನುಷ್ಠಾನಗೊಳಿಸಬೇಕು. ರಾಜ್ಯದಲ್ಲಿ ಆರಂಭಿಸಲಾಗಿರುವ ಅಕ್ಕ ಕಾಫಿ ಘಟಕಗಳ ಮಾದರಿಯಲ್ಲಿ ಇಂದಿರಾ ಕ್ಯಾಂಟೀನ್‌ ಗಳನ್ನು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ನಡೆಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದರು. ಈ ಆರ್ಥಿಕ ಚಟುವಟಿಕೆಗಳಲ್ಲಿ ಗ್ರಾಮೀಣ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಗ್ರಾಮೀಣ ಮಹಿಳೆಯರಿಗೆ ಕೌಶಲ್ಯ ತರಬೇತಿಗೆ ಕ್ರಮ ಕೈಗೊಳ್ಳಿ ಎಂದರು.

ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಕರ್ನಾಟಕ ಆಡಳಿತ ಸೇವೆಗಳ ಅಧಿಕಾರಿಯನ್ನು ನೇಮಿಸಲು ಕ್ರಮ ಕೈಗೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲು ಕಾರಣಗಳನ್ನು ಅಧ್ಯಯನ ಮಾಡಲು, ವರದಿ ಸಲ್ಲಿಸಲು ಮತ್ತು ರೋಗಿಗಳಿಗೆ ವಿಶ್ವ ದರ್ಜೆಯ ಚಿಕಿತ್ಸೆಯನ್ನು ಒದಗಿಸುವಂತೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Leave a Reply

Your email address will not be published. Required fields are marked *