ಬೆಂಗಳೂರು : ನಮ್ಮ ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿದ್ದ, ಬಿಎಂಆರ್ಸಿಎಲ್ ಇದೀಗ ಆ ವಿಚಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಮೆಟ್ರೋ ಟಿಕೆಟ್ ದರ ಹೆಚ್ಚಳ ಸಂಬಂಧ ಕೇಂದ್ರ ಸರ್ಕಾರ ವರದಿ ಕೇಳಿದ್ದು, ಸದ್ಯದ ಮಟ್ಟಿಗೆ ಅನುಮತಿ ಕೊಟ್ಟಿಲ್ಲ. ಹೀಗಾಗಿ ಮೆಟ್ರೋ ಟಿಕೆಟ್ ದರ ಏರಿಕೆ ಈ ವರ್ಷ ಇಲ್ಲ ಎಂಬುದು ಮೂಲಗಳು ತಿಳಿಸಿವೆ.
ಕಳೆದ ವಾರವಷ್ಟೇ ಟಿಕೆಟ್ ದರ ಏರಿಕೆ ಸಂಬಂಧ ಬಿಎಂಆರ್ಸಿಎಲ್ ಸಭೆ ನಡೆಸಿತ್ತು. ಶೇ 45ರಷ್ಟು ದರ ಹೆಚ್ಚಳ ಮಾಡಲು ನಿರ್ಧರಿಸಿತ್ತು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ ಎನ್ನಲಾಗಿದೆ.
ಕರ್ನಾಟಕದಲ್ಲಿ ಈಗಾಗಲೇ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳವಾಗಿದ್ದು, ಈ ಸಂದರ್ಭದಲ್ಲಿ ಮತ್ತೆ ಮೆಟ್ರೋ ಟಿಕೆಟ್ ದರ ಕೂಡ ಹೆಚ್ಚಳವಾದರೆ ಜನರಿಗೆ ಹೆಚ್ಚಿನ ಹೊರೆ ಆಗಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಅಲ್ಲದೆ, ಪ್ರಯಾಣ ದರ ಏರಿಕೆ ನಿರ್ಧಾರ ಅಂತಿಮಗೊಳಿಸುವುದಕ್ಕೂ ಮುನ್ನ ವರದಿ ಸಲ್ಲಿಸುವಂತೆ ಕೇಂದ್ರ ತಂಡ ಸೂಚನೆ ನೀಡಿದೆ. ಹೀಗಾಗಿ ವರದಿ ಸಲ್ಲಿಕೆಗೆ ಬಿಎಂಆರ್ಸಿಎಲ್ ಸಮಯ ಕೇಳಿದೆ.
ಬಿಎಂಆರ್ಸಿಎಲ್ ಫೆಬ್ರವರಿ 1 ರಿಂದ ಮೆಟ್ರೋ ಪ್ರಯಾಣ ದರ ಏರಿಕೆಗೆ ಮುಂದಾಗಿತ್ತು. ಅದಕ್ಕಾಗಿ ಪ್ರಯಾಣಿಕರಿಂದ ಅಭಿಪ್ರಾಯಗಳು, ಸಲಹೆಗಳನ್ನೂ ಸ್ವೀಕರಿಸಿತ್ತು. ಪ್ರಯಾಣಿಕರಿಂದ ದರ ಏರಿಕೆಗೆ ವಿರೋಧ ವ್ಯಕ್ತವಾಗಿದ್ದರೂ, ನಿರ್ವಹಣೆ ನೆಪವೊಡ್ಡಿ ದರ ಏರಿಕೆ ಬಿಎಂಆರ್ಸಿಎಲ್ ಮುಂದಾಗಿತ್ತು. ಇದೀಗ ಬಿಎಂಆರ್ಸಿಎಲ್ ನಿರ್ಧಾರಕ್ಕೆ ಕೇಂದ್ರದಿಂದ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ ಎನ್ನಲಾಗಿದೆ.