ಮೆಲ್ಬೋರ್ನ್ : ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಈ ನಡುವೆ ಸರಣಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಾರೆ ಅನ್ನೋ ವದಂತಿ ಎದ್ದಿದೆ.
ಬಿಜಿಟಿ ಸರಣಿಯಲ್ಲಿ ನಿರಂತರ ವೈಫಲ್ಯ ಕಂಡಿರುವ ರೋಹಿತ್ ಶರ್ಮಾ, ಟೆಸ್ಟ್ ನಾಯಕತ್ವ ತ್ಯಜಿಸಬೇಕು ಎಂಬ ಆಗ್ರಹ ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಭಾರತದ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ, ಬಿಜಿಟಿ ಟೆಸ್ಟ್ ಸರಣಿ ಬಳಿಕ ರೋಹಿತ್ ಶರ್ಮಾ ನಿವೃತ್ತಿಯಾಗುವ ಬಗ್ಗೆ ದೃಢ ನಿರ್ಧಾರ ತಾಳಬೇಕು ಎಂದರು.
ರೋಹಿತ್ ಶರ್ಮಾ ತಮ್ಮ ಟೆಸ್ಟ್ ನಾಯಕತ್ವ ತ್ಯಜಿಸುವ ಕುರಿತು ಯೋಚಿಸಬೇಕಾದ ಸಮಯ ಬಂದಿದೆ. ಬಿಜಿಟಿ ಬಳಿಕ ಈ ಕುರಿತು ಅವರು ಸೂಕ್ತ ತೀರ್ಮಾನ ಮಾಡಲಿದ್ದಾರೆ ಎಂಬ ಭರವಸೆ ಇದೆ. ಟೆಸ್ಟ್ ಪಂದ್ಯಾವಳಿಯಲ್ಲಿ ತಮ್ಮ ಪ್ರದರ್ಶನದ ಕುರಿತು ರೋಹಿತ್ ಗಂಭೀರವಾಗಿ ಚಿಂತಿಸಲಿದ್ದಾರೆ ಎಂದಿದ್ದಾರೆ.
ರೋಹಿತ್ ಶರ್ಮಾ ಅವರ ಅಲ್ಟ್ರಾ-ಡಿಫೆನ್ಸಿವ್ ವಿಧಾನ ಮತ್ತೆ ಮತ್ತೆ ಕೈಕೊಡುತ್ತಿದೆ. ಸತತ ಬ್ಯಾಟಿಂಗ್ ವೈಫಲ್ಯ ಅವರ ನಾಯಕತ್ವದ ಮೇಲೂ ಪರಿಣಾಮ ಬೀರುತ್ತಿದೆ. ಇದು ಟೆಸ್ಟ್ ಪಂದ್ಯಾವಳಿಯಿಂದ ರೋಹಿತ್ ನಿವೃತ್ತಿ ಹೊಂದುವ ಸಮಯ. ಆದರೆ ಈ ಕುರಿತು ಅವರೇ ನಿರ್ಧಾರ ಕೈಗೊಳ್ಳಬೇಕು ಎಂದು ರವಿಶಾಸ್ತ್ರಿ ಹೇಳಿದ್ದಾರೆ.