ಬೆಂಗಳೂರು : ಗ್ರಾಮ ಪಂಚಾಯಿತಿಗಳಿಗೇ ತೆರಿಗೆ ಸಂಗ್ರಹದ ಅಧಿಕಾರ ನೀಡುವ ʻಕರ್ನಾಟಕ ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ 2025ʼ ಅನ್ನು ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಲಾಯಿತು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧೇಯಕ ಮಂಡಿಸಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅನಧಿಕೃತ ಬಡಾವಣೆ ನಿವಾಸಿಗಳಿಗೆ ಈ ವಿಧೇಯಕ ತರುತ್ತಿದ್ದೇವೆ. ಅನಧೀಕೃತ ಬಡಾವಣೆಯ ನಿವಾಸಿಗಳು ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ಸರ್ಕಾರಕ್ಕೆ ತೆರಿಗೆ ಬರ್ತಿಲ್ಲ. ಹೀಗಾಗಿ ಗ್ರಾಮ ಪಂಚಾಯತಿಗಳಿಗೆ ತೆರಿಗೆ ಸಂಗ್ರಹ ಮಾಡುವ ಅಧಿಕಾರ ಕೊಡುತ್ತಿದ್ದೇವೆ.
ಮೊದಲ ಬಾರಿಗೆ ದುಪ್ಪಟ್ಟು ದಂಡ ವಿಧಿಸುತ್ತೇವೆ, ಬಳಿಕ ಸಾಮಾನ್ಯ ದಂಡ ಕಟ್ಟುವ ನಿಯಮ ತರುತ್ತಿದ್ದೇವೆ. ಈಗಾಗಲೇ ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಈ ನಿಮಯವನ್ನು ಅಳವಡಿಸಲಾಗಿದೆ. ಬಳಿಕ ಸರ್ವಾನುಮತದಿಂದ ವಿಧೇಯಕವನ್ನು ಅಂಗೀಕರಿಸಲಾಯಿತು.
ಬಳಿಕ ವಿಧಾನ ಪರಿಷತ್‌ನಲ್ಲಿ ರಾಜ್ಯ ಸರ್ಕಾರ ಮೂರು ನಿರ್ಣಯಗಳನ್ನು ಮಂಡನೆ ಮಾಡಿತು. ಅವುಗಳನ್ನು ನೋಡುವುದಾದ್ರೆ…
- ಕೇಂದ್ರ ಸರ್ಕಾರ ತರಲು ಹೊರಟಿರುವ ವಕ್ಫ್ ತಿದ್ದುಪಡಿ ವಿಧೇಯಕ ತಕ್ಷಣ ವಾಪಸ್ ಪಡೆಯಬೇಕು.
- ಕರ್ನಾಟಕ ಸರ್ಕಾರ ಜಾರಿ ಮಾಡಿರೋ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆಯನ್ನು ಕೇಂದ್ರ ಸರ್ಕಾರವೂ ಜಾರಿ ಮಾಡಬೇಕು.
- ಯುಜಿಸಿ ಕರಡು ರೆಗ್ಯುಲೇಷನ್ಸ್ 2025 ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರ ನಿರ್ಣಯ ಮಂಡನೆ ಮಾಡಿದೆ. ಇಂದು ಬಜೆಟ್ ಅಧಿವೇಶನ ಚರ್ಚೆ ಬಳಿಕ ಅಂಗೀಕಾರ ಮಾಡುವ ಸಾಧ್ಯತೆಯಿದೆ.
ನಂತರ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಸಚಿವ ಕೃಷ್ಣಭೈರೇಗೌಡ ಅವರು, ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ ವಿಧೇಯಕ 2025 ಮಂಡನೆ ಮಾಡಿದರು. ಯಾವುದೇ ಚರ್ಚೆ ಇಲ್ಲದೇ ವಿಧೇಯಕ ಅಂಗೀಕರಿಸಲಾಯಿತು. ಜೊತೆಗೆ ಕೃಷ್ಣಭೈರೇಗೌಡ ಅವರೇ ಮಂಡಿಸಿದ ಕರ್ನಾಟಕ ಸ್ಟಾಂಪು ವಿಧೇಯಕ 2025, ಕರ್ನಾಟಕ ನೋಂದಣಿ ವಿಧೇಯಕ 2025, ಕರ್ನಾಟಕ ಭೂ ಕಂದಾಯ ವಿಧೇಯಕ 2025, ಕರ್ನಾಟಕ ಗ್ರಾಮ ಹುದ್ದೆಗಳ ರದ್ದಿಯಾತಿ ವಿಧೇಯಕ 2025, ಕರ್ನಾಟಕ ಭೂ ಕಬಳಿಕೆ ನಿಷೇಧ 2025 ಗಳನ್ನು ಅಂಗೀಕರಿಸಲಾಯಿತು.