ಬೆಂಗಳೂರು : ಹಿಂದೂಗಳ ಸಂಪ್ರದಾಯದಲ್ಲಿ ನಿರಂತರ ಒಂದೊಂದು ಆಚರಣೆ ಇರುತ್ತೆ. ಹಿಂದೂ ನೌಕರರು ಎಲ್ಲಾ ಆಚರಣೆಗೆ ಅವಕಾಶ ಕೊಡಿ ಅಂತ ಮನವಿ ಮಾಡೋದಕ್ಕೆ ಶುರು ಮಾಡಿದ್ರೆ ಸರ್ಕಾರಿ ಕಚೇರಿಗಳೇ ಖಾಲಿ ಖಾಲಿಯಾಗಿರುತ್ತೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಈಗಾಗಲೇ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ರಂಜಾನ್‌ ತಿಂಗಳಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ 1 ಗಂಟೆ ಬಿಡುವು ನೀಡುವುದಾಗಿ ಹೇಳಿದ ಬೆನ್ನಲ್ಲೇ ರಾಜ್ಯದಲ್ಲೂ ಈ ಬೇಡಿಕೆ ಬಂದಿದೆ. ರಂಜಾನ್ ವೇಳೆ ನೌಕರರಿಗೆ 1 ಗಂಟೆ ರಿಲೀಫ್ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಹುಸೇನ್ ಮನವಿ ಮಾಡಿದ್ದಾರೆ, ಈ ಕುರಿತು ಮುತಾಲಿಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ಅಂಬೇಡ್ಕರ್ ಅವರು ಬರೆದಿರೋ ಸಂವಿಧಾನದಲ್ಲಿ ಎಲ್ಲ ಧರ್ಮದ ಆಚರಣೆಗೆ ಸಮಾನ ಅವಕಾಶವಿದೆ. ಭಾರತ ದೇಶ ಜಾತ್ಯತೀತ ರಾಷ್ಟ್ರ, ಒಂದು ಧರ್ಮದ ಸರ್ಕಾರಿ ನೌಕರರಿಗೆ ಈ ರೀತಿಯ ಅವಕಾಶ ಮಾಡಿಕೊಡೋದು ತಪ್ಪು ಮತ್ತು ಖಂಡನೀಯ. ಆದ್ರೆ ಕಾಂಗ್ರೆಸ್‌ ವೋಟ್‌ಬ್ಯಾಂಕ್‌ಗಾಗಿ ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಒಂದು ಧರ್ಮದ ಆಚರಣೆಗೆ ಅವಕಾಶ ಮಾಡಿಕೊಡೋದು ತಪ್ಪು, ಒಂದು ವೇಳೆ ನಮ್ಮ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ರೆ ಹಿಂದೂಗಳು ಕೂಡ ಶಿವರಾತ್ರಿ, ಏಕಾದಶಿ ಸೇರಿದಂತೆ ಅನೇಕ ಹಬ್ಬಗಳಲ್ಲಿ ಉಪವಾಸ ಮಾಡುತ್ತಾರೆ. ಅದಕ್ಕೂ ಅವಕಾಶ ನೀಡ್ತಾರಾ? ಇವತ್ತು ರಂಜಾನ್ ಉಪವಾಸಕ್ಕೆ ಒಂದು ಗಂಟೆ ಮನವಿ ಮಾಡುತ್ತಾರೆ. ನಾಳೆ ಶುಕ್ರವಾರದ ನಮಾಜ್‌ಗೂ ಅವಕಾಶ ಕೊಡಿ ಅಂತ ಕೇಳುತ್ತಾರೆ. ಇದಕ್ಕೆಲ್ಲ ಸರ್ಕಾರ ಅನುಮತಿ ನೀಡಬಾರದು ನೀಡಿದ್ರೇ ಹಿಂದೂಗಳು ಇದನ್ನು ವಿರೋಧಿಸಿ ಹೋರಾಟ ಮಾಡಬೇಕಾಗುತ್ತೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *