ಬೆಂಗಳೂರು : ಮೈಸೂರು ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದ್ದು, ಬೆಂಗಳೂರು ಅರಮನೆ ಆಸ್ತಿ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ತೀರ್ಮಾನಿಸಿದೆ.
ಇದೀಗ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ನಾವು ದ್ವೇಷ ಸಾಧಿಸುವುದಕ್ಕೆ ಹೋಗಲ್ಲ. ಕಾನೂನು ಇದೆ, ಮುಂದಿನ ಅಭಿವೃದ್ಧಿ ತೊಂದರೆ ಇದೆ. ಯಾರ ಮೇಲಿನ ದ್ವೇಷದಿಂದ ಅಲ್ಲ. ಜನರ ಒಳಿತಿಗಾಗಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, 3014 ಕೋಟಿ ರೂ. ಅಂದರೆ ಒಂದು ಎಕರೆಗೆ 200 ಕೋಟಿಗೂ ಹೆಚ್ಚಾಯಿತು. ಇಷ್ಟು ದರ ಬೆಂಗಳೂರಿನಲ್ಲಿ ಎಲ್ಲಿದೆ? ಜನರ ಮೇಲೆ ಏನು ಪರಿಣಾಮ ಬೀರುತ್ತೆ? ಎಂದರು.
ಸರ್ಕಾರಕ್ಕೆ ಹೊರೆ ಆಗಬಾರದು ಅಂತ ನಾವು ರಸ್ತೆ ಅಗಲೀಕರಣ ಮಾಡುತ್ತಿರುವುದು ಅಲ್ವಾ. ಟಿಡಿಆರ್ ಸರ್ಕಾರ ಕೊಡುವುದಕ್ಕೆ ಆಗದಿದ್ದರೆ ಪ್ರಾಜೆಕ್ಟ್ ಮಾಡುತ್ತೇವೆ ಅಂತ ಹೇಳಿದ್ದೀವಿ. ಮುಖ್ಯ ವಿಚಾರ ಇನ್ನೂ ಇತ್ಯರ್ಥ ಆಗಿಲ್ಲ. ಹೈಕೋರ್ಟ್ನಲ್ಲಿ ನಮ್ಮ ಪರ ಆಗಿದೆ. ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ತೊಂದರೆ ಆಗಬಾರದು. ರಾಜ್ಯ ಸರ್ಕಾರ ಅರಮನೆಯ ಭೂಮಿಯನ್ನು ವಶಕ್ಕೆ ಪಡೆಯುವುದಾದರೆ ಟಿಡಿಆರ್ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಜಾಗವನ್ನು ವಶಕ್ಕೆ ಪಡೆಯುವ ಮುಕ್ತ ಅವಕಾಶ ಸರ್ಕಾರ ಇಟ್ಟುಕೊಂಡಿದೆ ಎನ್ನಲಾಗಿದೆ.