ಕೈವ್ : ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ವಾಗ್ವಾದದ ಬಳಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಲಂಡನ್ನಲ್ಲಿ ಯುಕೆ ಪ್ರಧಾನಿ ಕೀರ್ ಸ್ಟಾಮರ್ ನೇತೃತ್ವದಲ್ಲಿ ಭದ್ರತಾ ಶೃಂಗಸಭೆ ನಡೆಯಿತು. ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ಫ್ರಾನ್ಸ್ನ ಎಮ್ಯಾನುಯೆಲ್ ಮ್ಯಾಕ್ರನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ 18 ನಾಯಕರು ಪಾಲ್ಗೊಂಡಿದ್ದರು.
ಈ ವೇಳೆ ರಷ್ಯಾ, ಉಕ್ರೇನ್ ನಡಿವಿನ ಯುದ್ಧ ನಿಲ್ಲಿಸಲು ಕದನ ವಿರಾಮ ಒಪ್ಪಂದಕ್ಕೆ ಸಂಪೂರ್ಣ ಸಹಮತ ಹೊಂದಿರುವುದಾಗಿ ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳು ಹೇಳಿದವು. ಅಲ್ಲದೇ ಇದರ ಬಗ್ಗೆ ಉಕ್ರೇನ್ ನಾಯಕರೊಂದಿಗೆ ಮಾತನಾಡುವುದಾಗಿ ಉಭಯ ನಾಯಕರು ಹೇಳಿದ್ದಾರೆ.
ಲಂಡನ್ನಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕುರಿತಾದ ಪ್ರಮುಖ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಝಲೆನ್ಸ್ಕಿ ವಿಡಿಯೋವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಷ್ಯಾ ವಿರುದ್ಧ ಯುದ್ಧದಲ್ಲಿ ಅಮೆರಿಕ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸದ ದಿನವೇ ಇಲ್ಲ ಎಂದು ಹೇಳಿದ್ದಾರೆ.
ಅಮೆರಿಕದ ಮಹತ್ವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅವರು ನೀಡಿದ ಬೆಂಬಲಕ್ಕೆ ನಾವು ಕೃತಜ್ಞತೆ ಸಲ್ಲಿಸದ ಒಂದೂ ದಿನವೂ ಇಲ್ಲ. ಅಮೆರಿಕದೊಂದಿಗೆ ಮತ್ತೆ ಒಟ್ಟಾಗಿ ರಾಜತಾಂತ್ರಿಕ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ಶಾಂತಿಗಾಗಿ ರಾಜತಾಂತ್ರಿಕತೆ ಇರಲಿದೆ. ನಾವೆಲ್ಲರೂ ಒಟ್ಟಾಗಿ ಇರುವುದಕ್ಕಾಗಿ, ಐರೋಪ್ಯ ಒಕ್ಕೂಟ ಹಾಗೂ ಅಮೆರಿಕದೊಂದಿಗೆ ರಾಜತಾಂತ್ರಿಕತೆ ಇರಲಿದೆ ಎಂದು ಹೇಳಿದ್ದಾರೆ.