ಬೆಂಗಳೂರು : ನಾವು ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಸಭೆ ನಡೆಸಿದ್ದೇವೆ. ನಮ್ಮಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಬೆಳಗಾವಿ ಅಧಿವೇಶನ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಯಾರಲ್ಲೂ ಅಸಮಾಧಾನ ಇಲ್ಲ. ಎಲ್ಲರೂ ಕೂಡ ಪಕ್ಷ, ಸರ್ಕಾರದ ಹಿತದೃಷ್ಟಿಯಲ್ಲಿ ಕೆಲಸ ಮಾಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿರುವುದಾಗಿ ತಿಳಿಸಿದರು.
ಬೆಳಗಾವಿ ರಾಜಕೀಯ ಬಗ್ಗೆ ಡಿಕೆಶಿ ಮಾಹಿತಿ ಕೊರತೆ ಇಲ್ಲ. ಪಕ್ಷದ ಎಲ್ಲ ಮಾಹಿತಿ ಅವರ ಬಳಿಯಿದೆ. ನಡೆದ ಸರ್ವ ಸದಸ್ಯರ ಸಭೆಗೆ ಕಾರಣಾಂತರಗಳಿಂದ ಪರಮೇಶ್ವರ್ ಬರಲು ಸಾಧ್ಯವಾಗಿಲ್ಲ ಎಂದರು.
ನಮ್ಮಲ್ಲಿ ಹೈ ಕಮಾಂಡ್ ತೀರ್ಮಾನವೇ ಅಂತಿಮ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವನ್ನು ಪಕ್ಷ ತೀರ್ಮಾನ ಮಾಡುತ್ತದೆ. ಸಚಿವರ ಬಗ್ಗೆ ಹೈಕಮಾಂಡ್‌ಗೆ ವರದಿ ನೀಡಿದರೆ ತಪ್ಪೇನು? ನಾವು ಕೆಲಸ ಮಾಡಿರುವುದು ಅವರಿಗೂ ಅರ್ಥವಾಗುತ್ತದೆ. ಪಕ್ಷದಲ್ಲಿ ಏನೇ ತೀರ್ಮಾನ ನಡೆದರೂ ಎಐಸಿಸಿ ಅಧ್ಯಕ್ಷರು ಮಾಡುತ್ತಾರೆ ಎಂದು ಹೇಳಿದರು.
ಹಿಂದಿನ ಸರ್ಕಾರ 32-40 ಸಾವಿರ ಕೋಟಿ ರೂ. ಬಾಕಿಯಿಟ್ಟಿತ್ತು. ಬಾಕಿ ಇರಿಸಿದ ಪರಿಣಾಮ ನಮ್ಮ ಮೇಲೆ ಹೊರೆ ಆಗುತ್ತಿದೆ. ಸಿದ್ದರಾಮಯ್ಯನವರು 16 ಬಜೆಟ್ ಮಂಡನೆ ಮಾಡಿದ್ದು ಎಲ್ಲವೂ ಸರಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುತ್ತಿಗೆದಾರರ ಬಾಕಿ ಇರುವ ಎಲ್ಲಾ ಬಿಲ್‌ಗಳನ್ನು ನಾವು ಕ್ಲೀಯರ್ ಮಾಡುತ್ತೇವೆ. ಆದರೆ ಅನುಮತಿ ಇಲ್ಲದೇ ಪ್ರಾರಂಭ ಮಾಡಿದ್ದರೆ ಅದಕ್ಕೆ ಸರ್ಕಾರ ಭಾಗಿಯಾಗುವುದಿಲ್ಲ. ಕೆಐಡಿಬಿಯಲ್ಲಿ 960 ಕೋಟಿ ರೂ. ಬಾಕಿಯಿದೆ. ನಮ್ಮ ಇಲಾಖೆಯಲ್ಲಿ ಜಾಸ್ತಿ ಬಾಕಿ ಇಲ್ಲ ಎಂದರು.
ಜಾತಿ ಜನಗಣತಿಗೆ ನಾನು ಎಂದು ವಿರೋಧ ಮಾಡಿಲ್ಲ. ವರದಿಯಲ್ಲಿ ಏನಿದೆ ನೋಡಿ ಆಮೇಲೆ ನಮ್ಮ ನಿಲುವು ತಿಳಿಸುತ್ತೇವೆ. ನೋಡದೇ ಯಾವುದೇ ಪ್ರತಿಕ್ರಿಯೆ ನೀಡಬಾರದು. ಲಿಂಗಾಯತ ಪಂಗಡ ಕೂಡಿಸಿ ಮಾಡಿ ಅಂತ ನಾನು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ಲಿಂಗಾಯತ ಉಪ ಪಂಗಡ ಒಂದಾಗಿ ಸೇರಿಸಿ ಲೆಕ್ಕ ಮಾಡಿದರೆ ಎಲ್ಲರೂ ಆಪ್ತರೇ ಆಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.