ಪಣಜಿ : ಪ್ರಧಾನಿ ನರೇಂದ್ರ ಮೋದಿಯವರ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಅನ್ನು ಎಲ್ಲಾ ಇಲಾಖೆಗಳ ಮುಖ್ಯಸ್ಥರು ಕಡ್ಡಾಯವಾಗಿ ಕೇಳಬೇಕು ಎಂದು ಬಿಜೆಪಿ ನೇತೃತ್ವದ ಗೋವಾ ಸರ್ಕಾರ ಆದೇಶ ಹೊರಡಿಸಿದೆ.

ಗೋವಾ ಸರ್ಕಾರ ಇಂದು ಹೊರಡಿಸಿದ ಸುತ್ತೋಲೆಯಲ್ಲಿ, ಎಲ್ಲಾ ಇಲಾಖೆಗಳ ಮುಖ್ಯಸ್ಥರು ‘ಮನ್ ಕಿ ಬಾತ್’ ಅನ್ನು ಕೇಳಿಕೊಂಡು ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಉತ್ತಮ ಆಡಳಿತ ಬಗ್ಗೆ ಸ್ಫೂರ್ತಿ ಪಡೆಯಬೇಕೆಂದು ಸೂಚಿಸಲಾಗಿದೆ.

ಸಾಮಾಜಿಕ ಖಾತೆಯಲ್ಲಿ ಸುತ್ತೋಲೆಯನ್ನು ಪೋಸ್ಟ್ ಮಾಡಿದ ಸಿಎಂ ಪ್ರಮೋದ್ ಸಾವಂತ್ ಅವರು, “ಮನ್ ಕಿ ಬಾತ್, ಗೌರವಾನ್ವಿತ ಪ್ರಧಾನಿ ಮೋದಿಜೀ ಅವರ ಮಾಸಿಕ ರೇಡಿಯೋ ಕಾರ್ಯಕ್ರಮವಾಗಿದೆ. ಅದರಲ್ಲಿ ಪ್ರಧಾನಿ ಉತ್ತಮ ಆಡಳಿತದ ಕುರಿತು ಸಾರ್ವಜನಿಕರ ಗಮನ ಸೆಳೆಯುವ ಹೊಸ ಬಗೆಯ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ. ಇವುಗಳನ್ನು ಅನುಷ್ಠಾನಗೊಳಿಸುವುದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ” ಎಂದು ಹೇಳಿದ್ದಾರೆ.

ಗೋವಾದಲ್ಲಿರುವ ಎಲ್ಲಾ ಸರ್ಕಾರಿ ಇಲಾಖೆಗಳ ಮುಖ್ಯಸ್ಥರು ಮನ್ ಕಿ ಬಾತ್ ಅನ್ನು ಕಡ್ಡಾಯವಾಗಿ ಕೇಳಬೇಕು ಎಂದು ನಿರ್ದೇಶಿಸಲಾಗಿದ್ದು, ರಾಷ್ಟ್ರಾದ್ಯಂತ ಸಕಾರಾತ್ಮಕ ಬದಲಾವಣೆಯನ್ನು ತಂದ ಯಶಸ್ಸಿನ ಕಥೆಗಳು ಮತ್ತು ಕಾರ್ಯಕ್ರಮದ ಸಮಯದಲ್ಲಿ ಹಂಚಿಕೊಳ್ಳಲಾದ ಉತ್ತಮ ಪದ್ಧತಿಗಳು ನಮಗೆ ಸ್ಫೂರ್ತಿಯಾಗಲಿವೆ’ ಎಂದರು.

Leave a Reply

Your email address will not be published. Required fields are marked *