ಬೆಂಗಳೂರು : ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಮುಂಭಾಗದಲ್ಲಿ ಪ್ರತಿದಿನ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರ ಪಾಡು ಹೇಳತೀರದಾಗಿದೆ. ನಗರಕ್ಕೆ ಬರುವ ಟ್ರಕ್ ಗಳು ಹಾಗೂ ಇತರ ಭಾರೀ ವಾಹನಗಳು ಸರ್ವೀಸ್ ರಸ್ತೆಯಲ್ಲಿ ನಿಲ್ಲುವುದರಿಂದ ಇಡೀ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಈ ಸಮಸ್ಯೆ ನಿವಾರಿಸಲು ಎರಡು ದಿನಗಳ ಹಿಂದೆ ವಿಕಾಸ ಸೌಧದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ನಂದಿ ಮೂಲಸೌಕರ್ಯ ಕಾರಿಡಾರ್ ಎಂಟರ್‌ಪ್ರೈಸಸ್ ಉನ್ನತ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗಿದೆ.
ಬಿಡಿಎಯ ಉದ್ದೇಶಿತ ಪೆರಿಫೆರಲ್ ರಿಂಗ್ ರೋಡ್ ಯೋಜನೆಯನ್ನು ನೈಸ್ ರಸ್ತೆಯೊಂದಿಗೆ ಸೇರಿಸುವುದು, ಜೊತೆಗೆ ಮುಖ್ಯ ಹೆದ್ದಾರಿಯನ್ನು ಪ್ರಮುಖ ರಸ್ತೆಗಳಿಗೆ ಸಂಪರ್ಕಿಸುವ ರ‍್ಯಾಂಪ್‌ಗಳ ನಿರ್ಮಾಣದಿಂದ ಬಿಐಇಸಿ ಬಳಿ ತುಮಕೂರು ಮುಖ್ಯ ರಸ್ತೆಯಲ್ಲಿನ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ನೈಸ್ ಪ್ರತಿನಿಧಿಯೊಬ್ಬರು ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು ಮೂರು ತಿಂಗಳ ಹಿಂದೆ ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದಲ್ಲಿ ಮೈಸೂರು ಮತ್ತು ಬೆಂಗಳೂರು ನಡುವೆ ಮತ್ತಷ್ಟು ಪ್ರಯಾಣವನ್ನು ಸುಲಭಗೊಳಿಸಲು ಬಿಎಂಐಸಿ ಯೋಜನೆಯನ್ನು ಪೂರ್ಣಗೊಳಿಸಲು ಪ್ರಸ್ತಾಪಿಸಿದ್ದರು. ಇದು ಬಿಡದಿ, ರಾಮನಗರ ಮತ್ತು ಮಂಡ್ಯದಲ್ಲಿ ಟೌನ್‌ಶಿಪ್‌ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದರು.
ಈ ಸಭೆಯಲ್ಲಿ ನಗರದಲ್ಲಿ ಟ್ರಾಫಿಕ್ ತಪ್ಪಿಸಲು ಸಾಧ್ಯವಿರುವ ಎಲ್ಲಾ ಪರ್ಯಾಯ ಆಯ್ಕೆಗಳ ಕುರಿತು ಚರ್ಚಿಸಲಾಗಿದ್ದು, ಎಲ್ಲಾ ಏಜೆನ್ಸಿಗಳಿಂದ ಅಭಿಪ್ರಾಯ ಸಂಗ್ರಹದ ಮಾತುಕತೆಗಳು ಪ್ರಾಥಮಿಕ ಹಂತದಲ್ಲಿವೆ ಎಂದು ಎನ್‌ಹೆಚ್‌ಎಐ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ ಬ್ರಹ್ಮಂಕರ್ ಹೇಳಿದರು.
ಈ ಸಮಸ್ಯೆಯನ್ನು ನಿಭಾಯಿಸಲು ಬಿಡಿಎ ರಾಂಪ್ ಅನ್ನು ಪ್ರಸ್ತಾಪಿಸಿದೆ ಎಂದು ಸಭೆಯಲ್ಲಿದ್ದ ಮತ್ತೊಬ್ಬ ಅಧಿಕಾರಿ ಹೇಳಿದರು. ರಾಂಪ್ ಮುಂಬರುವ ಪೆರಿಫೆರಲ್ ರಿಂಗ್ ರಸ್ತೆಯಿಂದ ನೈಸ್ ರಸ್ತೆಯನ್ನು ಸಂಪರ್ಕಿಸಬಹುದು. ಆದರೆ, ಪಿಡಬ್ಲ್ಯುಡಿ ಕೂಡ ತನ್ನದೇ ಆದ ಆಯ್ಕೆಯನ್ನು ಪ್ರಸ್ತಾಪಿಸಿದೆ ಎಂದು ತಿಳಿಸಿದರು.