ಬೆಂಗಳೂರು : ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆ ಬಳಕೆ ಆರೋಗ್ಯಕ್ಕೆ ಹಾನಿಕರ ಮತ್ತು ಬಟಾಣಿಗೆ ಫುಡ್‌ ಕಲರ್‌ ಬಳಸುವುದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಪರೀಕ್ಷೆಯಿಂದ ದೃಢಪಟ್ಟಿದೆ. ಇದರ ಬೆನ್ನಲ್ಲೇ ಟ್ಯಾಟೂನಿಂದ ಎಚ್​ಐವಿ ಹಾಗೂ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆಯ ಆಯುಕ್ತ ಶ್ರೀನಿವಾಸ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವರು, ಟ್ಯಾಟೂನಿಂದ ಆರೋಗ್ಯ ಸಮಸ್ಯೆಗಳ ಸಾಧ್ಯತೆ ವಿಚಾರವಾಗಿ ಕೇಂದ್ರ ಸರ್ಕಾರ ನಿಯಮ ರೂಪಿಸಲು ಅವಕಾಶ ಇದೆ. ಟ್ಯಾಟೂ ಇಂಕ್ ಅನ್ನು ಕಾಂತಿ ವರ್ಧಕಗಳ ಅಡಿಯಲ್ಲಿ ತರಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ನಂತರ ಟ್ಯಾಟೂ ಪಾರ್ಲರ್ ಗಳನ್ನು ನಿಯಂತ್ರಿಸಲು ಕಾನೂನು ರೂಪಿಸಲಾಗುವುದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಚರ್ಮ ಕ್ಯಾನ್ಸರ್, ಹೆಚ್​ಐವಿ ಹಾಗೂ ಚರ್ಮ ರೋಗ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿಯಂತಹ ಮಾರಣಾಂತಿಕ ಸೋಂಕುಗಳು ಜನರಲ್ಲಿ ಹೆಚ್ಚಾಗುತ್ತಿವೆ. ಇಂತಹ ಸೋಂಕುಗಳು ಹೆಚ್ಚಾಗಲು ಟ್ಯಾಟೂ ಹಾಕಿಸುವುದು ಕೂಡ ಒಂದು ಕಾರಣ ಎಂಬುದು ಆರೋಗ್ಯ ಇಲಾಖೆ ನಡೆಸಿರುವ ತಪಾಸಣೆಯಿಂದ ತಿಳಿದುಬಂದಿದೆ.

ಅಷ್ಟೆಅಲ್ಲದೆ ಟ್ಯಾಟೂವನ್ನು ಹಾಕುವಾಗ ಬಳಸುವ ಬಣ್ಣದಲ್ಲಿ ಅಪಾಯಕಾರಿ ಮೆಟಲ್ ಬಳಕೆಯಾಗುತ್ತಿರುವುದು ಕಂಡುಬಂದಿದೆ. ಇದು ಸಹ ಮನುಷ್ಯನ ದೇಹಕ್ಕೆ ಅಪಾಯಕಾರಿಯಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಟ್ಯಾಟೂ ನಿಯಂತ್ರಿಸಲು ಹೊಸ ಕಾನೂನು ಜಾರಿಗೆ ಮುಂದಾಗಿದೆ.

ಜನವರಿಯಿಂದ ಒಟ್ಟು 3608 ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಲಾಗಿದೆ. ಈ ಪೈಕಿ 26 ಮಾದರಿಗಳು ಅಸುರಕ್ಷಿತವಾಗಿವೆ ಹಾಗೂ 28 ಕಳಪೆಯಾಗಿವೆ ಎಂದು ಗಮನಕ್ಕೆ ಬಂದಿದೆ. ಈ ಘಟನೆ ಸಂಬಂಧ 52 ಆಹಾರ ಉತ್ಪಾದಕರಿಗೆ ನೋಟಿಸ್ ನೀಡಲಾಗಿದ್ದು, ಪ್ಲಾಸ್ಟಿಕ್ ಬಳಕೆ ಮಾಡದಂತೆ ಈಗಾಗಲೇ ನಾವು ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *