Watch World Cup Cricket Matches Free: ಮುಂಬರುವ ಏಷ್ಯಾಕಪ್ ಮತ್ತು ಐಸಿಸಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಳ ಡಿಜಿಟಲ್ ಪ್ರಸಾರದ ಹಕ್ಕು ಹೊಂದಿರುವ ಡಿಸ್ನಿ ಹಾಟ್ಸ್ಟಾರ್ ಈಗ ಆ ಪಂದ್ಯಗಳನ್ನು ತನ್ನ ಪ್ಲಾಟ್ಫಾರ್ಮ್ನಲ್ಲಿ ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿದೆ.
ನವದೆಹಲಿ: ಐಪಿಎಲ್ ಟೂರ್ನಿಯ ಡಿಜಿಟಲ್ ಸ್ಟ್ರೀಮಿಂಗ್ ಪ್ರಸಾರ ಮಾಡಿದ್ದ ಜಿಯೋಸಿನಿಮಾ (JioCinema) ಹೊಸ ವಿಶ್ವದಾಖಲೆ ಬರೆದದ್ದು ನೆನಪಿರಬಹುದು. ಐಪಿಎಲ್ ಪಂದ್ಯಗಳ ಪ್ರಸಾರ ಜಿಯೋಸಿನಿಮಾದಲ್ಲಿ ಉಚಿತವಾಗಿ ನೀಡಿದ್ದರಿಂದ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಸುಮಾರು 45 ಕೋಟಿಯಷ್ಟು ಜನರು ಐಪಿಎಲ್ ವೀಕ್ಷಿಸಿದ್ದರು. ಫೈನಲ್ ಪಂದ್ಯದಲ್ಲಿ 3 ಕೋಟಿಗೂ ಹೆಚ್ಚು ಮಂದಿ ಲೈವ್ ವೀಕ್ಷಣೆ ಮಾಡಿ ದಾಖಲೆ ಬರೆಯಲಾಗಿತ್ತು. ಅದಕ್ಕೂ ಹಿಂದೆ ಐಪಿಎಲ್ ಪಂದ್ಯಗಳ ಡಿಜಿಟಲ್ ಪ್ರಸಾರದ ಹಕ್ಕು ಪಡೆದಿದ್ದ ಡಿಸ್ನಿ ಹಾಟ್ಸ್ಟಾರ್ಗೆ (Disney+ Hotstar) ಹೆಚ್ಚಿನ ವೀಕ್ಷಕರು ಸಿಕ್ಕಿರಲಿಲ್ಲ. ಸಬ್ಸ್ಕ್ರೈಬಿಂಗ್ ಆಗಬೇಕಿದ್ದರಿಂದ ಹಾಟ್ಸ್ಟಾರ್ಗೆ ವೀಕ್ಷಕರ ಸಂಖ್ಯೆ ಕಡಿಮೆ ಆಗಿದ್ದರು. ಈಗ ಜಿಯೋಸಿನಿಮಾ ಪಡೆದಿರುವ ಅಪಾರ ಯಶಸ್ಸು ಹಾಟ್ಸ್ಟಾರ್ ಕಾರ್ಯತಂತ್ರವನ್ನು ಬದಲಿಸುವಂತೆ ಮಾಡಿದೆ. ವರದಿಗಳ ಪ್ರಕಾರ ಮುಂಬರುವ ಏಷ್ಯಾಕಪ್ ಮತ್ತು ಐಸಿಸಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಳ (Asia Cup and ICC World Cup Cricket) ಡಿಜಿಟಲ್ ಪ್ರಸಾರದ ಹಕ್ಕು ಹೊಂದಿರುವ ಡಿಸ್ನಿ ಹಾಟ್ಸ್ಟಾರ್ ಈಗ ಆ ಪಂದ್ಯಗಳನ್ನು ತನ್ನ ಪ್ಲಾಟ್ಫಾರ್ಮ್ನಲ್ಲಿ ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿದೆ.
ಭಾರತದಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರು ಕ್ರಿಕೆಟ್ ಪಂದ್ಯಗಳನ್ನು ನೋಡುವ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಸ್ಟ್ರೀಮಿಂಗ್ ಅನ್ನು ಉಚಿತವಾಗಿ ನೀಡಲು ನಿರ್ಧರಿಸಿರುವುದಾಗಿ ಡಿಸ್ನಿ ಹಾಟ್ಸ್ಟಾರ್ ಸಂಸ್ಥೆ ಜೂನ್ 8ರಂದು ಘೋಷಿಸಿದೆ. ಇದರಿಂದ ಐಪಿಎಲ್ ಟೂರ್ನಿ ವೇಳೆ ತಾನು ಕಳೆದುಕೊಂಡಿದ್ದ ಕೋಟಿಗಟ್ಟಲೆ ವೀಕ್ಷಕರನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿ ಹಾಟ್ಸ್ಟಾರ್ ಇದೆ.
2023ರ ಐಪಿಎಲ್ ಪಂದ್ಯಗಳನ್ನು ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಉಚಿತವಾಗಿ ಪ್ರಸಾರ ಮಾಡಿದ್ದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ಜಿಯೋಸಿನಿಮಾ ದಿಟ್ಟ ಹಾಗು ಅಪಾಯಕಾರಿ ಹೆಜ್ಜೆ ಇಟ್ಟಿತ್ತು. ವೀಕ್ಷಕರನ್ನು ತನ್ನ ಪ್ಲಾಟ್ಫಾರ್ಮ್ಗೆ ಸೆಳೆಯಲು ಕ್ರಿಕೆಟ್ಗಿಂತ ಬೇರೆ ಸಾಧನ ಇಲ್ಲ ಎಂಬುದು ಜಿಯೋಗೆ ಗೊತ್ತಿದ್ದರಿಂದ ಈ ರಿಸ್ಕ್ ತೆಗೆದುಕೊಂಡಿತ್ತು. ಈಗ ತನ್ನ ಪ್ಲಾಟ್ಫಾರ್ಮ್ಗೆ ಕ್ರಿಕೆಟ್ ವೀಕ್ಷಿಸಲು ಬಂದಿದ್ದ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುವುದು ಜಿಯೋ ಮುಂದಿರುವ ಸವಾಲು.
ಈಗ ನಡೆಯುತ್ತಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ನ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕು ಸ್ಟಾರ್ ಗ್ರೂಪ್ಗೆ ಇದೆ. ಡಿಸ್ನಿ ಹಾಟ್ಸ್ಟಾರ್ನಲ್ಲಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಉಚಿತವಾಗಿಯೇ ಸ್ಟ್ರೀಮಿಂಗ್ ಆಗುತ್ತಿದೆ. ಸಾಕಷ್ಟು ವೀಕ್ಷಕರನ್ನು ಮರಳಿ ಪಡೆದಿದೆ. ಮುಂಬರುವ ಏಷ್ಯಾ ಕಪ್ ಮತ್ತು ಐಸಿಸಿ ವರ್ಲ್ಡ್ ಕಪ್ ಟೂರ್ನಿಗಳು ಹೆಚ್ಚು ಜನಪ್ರಿಯವಾಗಿರುವುದರಿಂದ ಹೆಚ್ಚಿನ ವೀಕ್ಷಕರನ್ನು ಸೆಳೆಯುವ ಅವಕಾಶ ಹಾಟ್ಸ್ಟಾರ್ಗೆ ಇದೆ.
ಐಪಿಎಲ್ನಲ್ಲಿ ಹಾಟ್ಸ್ಟಾರ್ದೂ ದಾಖಲೆಯೇ….
ಐಪಿಎಲ್ 2023 ಟೂರ್ನಿಯಲ್ಲಿ ಭರ್ಜರಿ ಲಾಭ ಮಾಡಿದ್ದು ಜಿಯೋಸಿನಿಮಾ ಮಾತ್ರವಲ್ಲ, ಸ್ಟಾರ್ ಗ್ರೂಪ್ ಕೂಡ ಹೌದು. ಜಿಯೋ ಬಳಿ ಡಿಜಿಟಲ್ ಪ್ರಸಾರ ಹಕ್ಕು ಇದ್ದರೆ, ಸ್ಟಾರ್ ಬಳಿ ಟಿವಿ ಪ್ರಸಾರ ಹಕ್ಕು ಇತ್ತು. ಜಿಯೋದಲ್ಲಿ ಕ್ರಿಕೆಟ್ ನೋಡಿದವರ ಸಂಖ್ಯೆ 44 ಕೋಟಿಯಷ್ಟಿದ್ದರೆ, ಟಿವಿಯಲ್ಲಿ ಸ್ಟಾರ್ ವಾಹಿನಿಗಳಲ್ಲಿ ಐಪಿಎಲ್ ವೀಕ್ಷಿಸಿದವರ ಸಂಖ್ಯೆ 50 ಕೋಟಿ ಎಂದು ಅಂದಾಜು ಮಾಡಲಾಗಿದೆ. ಜಿಯೋ ಮತ್ತು ಸ್ಟಾರ್ ಇಬ್ಬರದ್ದೂ ದಾಖಲೆ ವೀಕ್ಷಕರ ಸಂಖ್ಯೆಯೆ.