ಶ್ರೀ ರಾಘವೇಂದ್ರ ಗುರುಗಳು ಸನ್ಯಾಸ ಸ್ವೀಕಾರ ಮಾಡಿದ ನಂತರ, ಸಂಚಾರ ಕೈಗೊಂಡು ಅವರು ತಂಗಿದ ಕಡೆಯೆಲ್ಲಾ ರಾಯರು ತಮ್ಮ ಭಕ್ತರ  ಕಷ್ಟ- ನಷ್ಟ, ರೋಗ ರುಜನೆಳನ್ನು ಪರಿಹರಿಸಿದರು, ಕಿತ್ತು ತಿನ್ನುವ ಬಡತನದ ಕುಟುಂಬಗಳಿಗೆ ಪರಿಹಾರ, ಸಂತಾನ ಭಾಗ್ಯ, ಮುಗ್ಧ ಭಕ್ತಗೆ ಜ್ಞಾನ ನೀಡಿದರು. ಅಜ್ಞಾನಿಗಳ ದುರಹಂಕಾರಕ್ಕೆ ಜ್ಞಾನದ ಅರಿವು ಮೂಡಿಸಿದರು. ಸತ್ತು ಹೋದ ಶವಕ್ಕೆ ಜೀವ ಕೊಟ್ಟರು. ಇನ್ನು ಹಲವಾರು ಚಮತ್ಕಾರಗಳೇ ನಡೆದಿದ್ದು ಅದರಲ್ಲಿ ಒಂದೆರಡು.

ಒಮ್ಮೆ ರಾಘವೇಂದ್ರ ಗುರುಗಳ ಸಂಚಾರ ಹೊರಟು ಅವರು ಕುಳಿತ ಮೇನೆಯನ್ನು ಶಿಷ್ಯರು ಹೊತ್ತು ಹುಬ್ಬಳ್ಳಿಗೆ ಬರುತ್ತಿದ್ದರು. ರಾಯರ ವಿಶ್ರಾಂತಿಗಾಗಿ ಅಲ್ಲೊಂದು ಕಡೆ ಮೇನೆ  ಇಳಿಸಿದರು. ರಾಘವೇಂದ್ರರು ಹತ್ತಿರದಲ್ಲಿದ್ದ ದಿಬ್ಬದ ಮೇಲೆ ಕುಳಿತರು. ದೂರದಲ್ಲಿ ನೋಡುತ್ತಿದ್ದ ನಾಲ್ಕಾರು ಹುಡುಗರು ಓಡಿಬಂದು, ಇಲ್ಲಿ ಏಕೆ ಕುಳಿತಿರಿ “ಸವನೂರು ನವಾಬರ”  ಮಗ ಹಾವು ಕಚ್ಚಿ ಸತ್ತು ಹೋದ ಇದು ಅವನ ಸಮಾಧಿ. ಸಮಾಧಿ ಮೇಲೆ ಕುಳಿತು ನಿಮಗೆ ಮೈಲಿಗೆಯಾಯಿತು ಎಂದರು. ಇದನ್ನು ಕೇಳಿದ ಗುರುಗಳು, ಇಲ್ಲ ಆ ಹುಡುಗನ ಆಯಸ್ಸು ಇನ್ನೂ ಮುಗಿದಿಲ್ಲ.

ಆದ್ದರಿಂದ ಅವನನ್ನು ಹೊರಗೆ ತೆಗೆದರೆ  ಅವನು ಬಹಳ ಕಾಲ ಬದುಕುತ್ತಾನೆ ಎಂದರು. ಈ ವಿಷಯ ನವಾಬನ ಕಿವಿಗೆ ಮುಟ್ಟುತ್ತಿದ್ದಂತೆ ಆತ ಓಡಿ ಬಂದು ಗುರುಗಳಿಗೆ ನಮಸ್ಕರಿಸಿ  ಗುರುಗಳ ಆದೇಶ ದಂತೆ ದಿಬ್ಬದಿಂದ ಶವವನ್ನು ಹೊರಗೆ ತೆಗೆಸಿದನು.  ಗುರುಗಳು ಸ್ವಲ್ಪ ಹೊತ್ತು ಮೌನವಾಗಿದ್ದು ಧ್ಯಾನಸ್ಥರಾದರು, ಅವರು ಧ್ಯಾನದಲ್ಲಿ ಇದ್ದಂತೆ  ಹುಡುಗನ ಶರೀರ ಚಲಿಸಿದಂತಾಗಿ ಆತ ಕಣ್ಣು ಬಿಟ್ಟು ಎಚ್ಚರಗೊಂಡನು. ಸಂತಸ ಗೊಂಡ ನವಾಬನು ರಾಯರಿಗೆ ಮತ್ತು ಅಲ್ಲಿ ಬಂದ ಸಕಲರಿಗೂ ಸತ್ಕಾರ ಮಾಡಿ ಗೌರವಿಸಿದನು. ಗುರುಗಳಿಗೆ  12 ಗ್ರಾಮಗಳನ್ನು ಉಂಬಳಿ ಕೊಟ್ಟನು. ಅದೀಗ ‘ಕೃಷ್ಣಾಪುರ’ ಗ್ರಾಮವಾಗಿದೆ.

*ದಡ್ಡ ವೆಂಕಣ್ಣನಿಗೆ ಜ್ಞಾನ ನೀಡಿದ ಮಹಾನುಭಾವರು:-*

ಒಮ್ಮೆ ರಾಘವೇಂದ್ರರು ಚಾತುರ್ಮಾಸವನ್ನು ಬೇರೆ ಗ್ರಾಮದಲ್ಲಿ ಮಾಡಲು ಸಂಕಲ್ಪಿಸಿದರು. ಅದೇ ರೀತಿ ಚಾತುರ್ಮಾಸ ಗೊತ್ತು ಪಡಿಸಿದ ಗ್ರಾಮದಲ್ಲಿ ಪೂರ್ತಿ ಆಚರಣೆ ಮುಗಿದ ನಂತರ ಹೊರಡುವಾಗ, ಬಂದ ಭಕ್ತರಿಗೆಲ್ಲ ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸುತ್ತಿದ್ದರು. ಹೀಗೆ ಬಂದ ಭಕ್ತರ ನಡುವೆ ಒಬ್ಬ ದನ ಕಾಯುವ ಹುಡುಗ ಬಂದನು. ಇವನ ಹೆಸರು ವೆಂಕಣ್ಣ , ತುಂಬಾ ಪೆದ್ದ- ಮುಗ್ಧ,  ಗುರುಗಳೇ ನಾನು ನಿಮ್ಮ ಜೊತೆ ಬರುತ್ತೇನೆ ಎಂದನು. ಅವನ ಪರಿಚಯ ಗುರುಗಳಿಗೆ ಇತ್ತು.

ಚಾತುರ್ಮಾಸ ಆಚರಣೆ ಇದ್ದಷ್ಟು ದಿನವೂ,  ಆ ಜಾಗವನ್ನೆಲ್ಲ ಶುಚಿಗೊಳಿಸುವುದು, ಹೂಗಳನ್ನು ತರುವುದು, ಮಾವಿನ ತೋರಣ ಕಟ್ಟುವುದು, ಅಲ್ಲಿದ್ದವರು ಏನಾದರೂ ಸಣ್ಣಪುಟ್ಟ ಕೆಲಸ ಹೇಳಿದರೆ ಸಂತೋಷದಿಂದ ಮಾಡಿಕೊಡುತ್ತಿದ್ದ ಹೀಗೆ  ನಿತ್ಯವೂ ಸೇವೆ  ಮಾಡಿಕೊಡುತ್ತಿದ್ದನು. ಗುರುಗಳು, ಮುಂದೆ ನಿನಗೆ ಒಳ್ಳೆಯ ದಿನಗಳು ಬರುತ್ತದೆ ಎಂದರು.

ಆದರೆ ವೆಂಕಣ್ಣ ಹೇಳಿದ, ಗುರುಗಳೇ ನನಗೆ ತಂದೆ- ತಾಯಿ, ಬಂಧು- ಬಳಗ ಯಾರು ಇಲ್ಲ ನನ್ನ ಜೊತೆಯವರು ನಿತ್ಯವೂ ನನ್ನನ್ನು ಅನಾಥ, ದಿಕ್ಕಿಲ್ಲದವನು, ಪೆದ್ದ -ಮೂರ್ಖ ಎಂದು ಬಯ್ಯುತ್ತಾರೆ, ಕೀಟಲೆ ಮಾಡಿ ರೇಗಿಸುತ್ತಾರೆ, ಎಂದು ಹೇಳಿ ಕಣ್ಣಲ್ಲಿ ನೀರು ಹಾಕಿದನು. ಗುರುಗಳು ಅವನ ಶಿರದ ಮೇಲೆ ಕೈ ಇಟ್ಟು, ಮಗು ಚಿಂತಿಸಬೇಡ ‘ಶ್ರೀರಾಮನ’ ಅನುಗ್ರಹ ನಿನಗಿದೆ. ಈ  ಅಕ್ಷತೆಯನ್ನು ನಿನ್ನ ಜೊತೆಯಲ್ಲಿ ಇಟ್ಟುಕೊಂಡಿರು, ನಿನ್ನ ಕಷ್ಟ ಕಾಲದಲ್ಲಿ ಇದನ್ನು ಹಿಡಿದುಕೊಂಡು ಸ್ಮರಿಸು, ಎಂದು ಆಶೀರ್ವದಿಸಿ ಹೊರಟರು.

ಕೆಲವು ತಿಂಗಳು ಕಳೆದವು. ಒಂದು ದಿನ ವೆಂಕಣ್ಣ ದನಗಳನ್ನು ಕಾಯುತ್ತಿದ್ದ ಅದೇ ಮಾರ್ಗದಲ್ಲಿ ನವಾಬನ ನೆಂಟ ಆದವಾನೀಯ ‘ಸಿದ್ಧಿ ಮಸೂರ್ ಖಾನ್’  ಎಂಬು ವನು  ತನ್ನ ಅಂಗರಕ್ಷಕರ ಕಾವಲಿನಲ್ಲಿ ಅಂಬಾರಿಯಲ್ಲಿ ಕುಳಿತು ಬರುತ್ತಿದ್ದನು. ಹೀಗೆ ಬರುವಾಗ ಯಾರೋ ಒಬ್ಬ ಸೈನಿಕ ಬಂದು  ಒಂದು ಲಕೋಟೆಯನ್ನು  ಮಸೂರ್ ಖಾನ್ ಕೈಗೆ ಕೊಟ್ಟನು. ತೆರೆದು ನೋಡಿದರೆ ಅದು ಕನ್ನಡದಲ್ಲಿ ಬರೆದಿತ್ತು.  ಅಲ್ಲಿ ಯಾರಿಗೂ ಕನ್ನಡ ಓದಲು ಬರುತ್ತಿರಲಿಲ್ಲ. ಈಗೇನು ಎಂದು ನೋಡುತ್ತಿದ್ದಾಗ  ದನಗಳನ್ನು ಕಾಯುತ್ತಿದ್ದ  ವೆಂಕಣ್ಣ ಕಣ್ಣಿಗೆ ಬಿದ್ದನು. ಅವನನ್ನೇ ಕರೆದು ಲಕೋಟೆಯನ್ನು ಕೊಟ್ಟು ಓದಲು ಹೇಳಿದನು.

ಆದರೆ ವೆಂಕಣ್ಣ ಶಾಲೆಗೆ ಹೋಗಿಲ್ಲ ಅಕ್ಷರ ಜ್ಞಾನ ಇಲ್ಲ.  ನನಗೆ ಓದಲು ಬರೆಯಲು ಬರುವುದಿಲ್ಲ ಸ್ವಾಮಿ ಎಂದನು. ಆದರೆ ಆ ನವಾಬ ಕೋಪದಿಂದ ನೀನು ಬ್ರಾಹ್ಮಣರ ಹುಡುಗನಾಗಿದ್ದು ಓದಲು ಬರೆಯಲು ಬರುವುದಿಲ್ಲವೇ? ಸುಳ್ಳು ಹೇಳಿದರೆ ಛಡಿ ಏಟು ಬೀಳುತ್ತದೆ ಎಂದನು. ಹೆದರಿದ ವೆಂಕಣ್ಣಗೆ “ಕಷ್ಟ ಕಾಲದಲ್ಲಿ  ಸ್ಮರಿಸು” ಎಂದು ರಾಘವೇಂದ್ರರು ಹೇಳಿದ ಮಾತು ನೆನಪಾಯಿತು ರಾಘವೇಂದ್ರರನ್ನು ಸ್ಮರಿಸುತ್ತಾ,  ಪತ್ರವನ್ನು ಬಿಚ್ಚಿ ನೋಡಿದ  ಗುರುಗಳ ಅನುಗ್ರಹದಿಂದ ಎಲ್ಲಾ ಅಕ್ಷರಗಳು ಅವನಿಗೆ ತಿಳಿದು, ಒಂದಕ್ಷರ ತಪ್ಪಿಲ್ಲದಂತೆ ಸ್ಪಷ್ಟವಾಗಿ ಓದಿದನು.

ಆ ಪತ್ರದಲ್ಲಿ ಇದ್ದ ವಿಷಯ “ಸಿದ್ದಿ ಮಸೂರ್ ಖಾನ್ಗೆ” ಗಂಡು ಮಗು ಜನಿಸಿದೆ. ಮಗು ಮತ್ತು ತಾಯಿ ಚೆನ್ನಾಗಿದ್ದಾರೆ. ಎಂಬ ಶುಭ ಸಮಾಚಾರ ಇತ್ತು. ಇದನ್ನು ಕೇಳಿದ ನವಾಬನಿಗೆ  ಸಂತೋಷವಾಯಿತು. ತಕ್ಷಣ  ನವಾಬನು ಬಾಲಕ ವೆಂಕಣ್ಣನ ಬೆನ್ನು ತಟ್ಟಿ ಶಹಬಾಸ್ ಎಂದನು. ನೀನು ಏನು ಮಾಡಿಕೊಂಡಿದಿ ಎಂದು ಕೇಳಿದನು ವೆಂಕಣ್ಣ ದನ ಕಾಯುತ್ತಿದ್ದೇನೆ ಎಂದನು. ಈ ಕೆಲಸ ಬಿಟ್ಟು ನನ್ನ ಸೈನ್ಯದಲ್ಲಿ ಸೇರುವೆ ಯಂತೆ ಎಂದು ನವಾಬ ತನ್ನ ಜೊತೆಗೆ  ಕರೆದುಕೊಂಡು ಹೋಗಿ ಸೈನ್ಯದಲ್ಲಿ ಸೇರಿಸಿ ದನು. ಒಮ್ಮೆ ವೆಂಕಣ್ಣನಿಗೆ  ಯೋಚನೆ ಬಂದಿತು.

ಅಕ್ಷರ ಜ್ಞಾನವಿಲ್ಲದ ನನಗೆ ಪತ್ರ ಓದಲು ಬಂದಿದ್ದು ರಾಯರ ಪವಾಡವೇ ಸರಿ. ಪತ್ರ ಓದಿದ್ದು ನೆನೆದರೆ ನಂಬಲು ಸಾಧ್ಯವಿಲ್ಲ. ನಾನು ಈಗಿಂದಲೇ ಓದು ಬರಹ ಕಲಿತು ವಿದ್ಯಾವಂತನಾಗಬೇಕು ಎಂದು ಯೋಚಿಸಿ, ಒಬ್ಬ ಗುರುವಿನ ಮೂಲಕ ವಿದ್ಯಾಭ್ಯಾಸವನ್ನು ಮಾಡಿದನು. ಅವನು ಎಷ್ಟು ಬುದ್ಧಿವಂತನಾದ ಎಂದರೆ, “ಸಿದ್ಧಿ ಮಸೂರ್ ಖಾನ್” ಸೈನಿಕನಾಗಿದ್ದ ವೆಂಕಣ್ಣನನ್ನು  ತನ್ನ ಆಸ್ಥಾನದ “ದಿವಾನ” ನನ್ನಾಗಿ ಮಾಡಿಕೊಂಡನು. ಈ ರೀತಿ ದನ ಕಾಯುತ್ತಿದ್ದ ಬಡವೆಂಕಣ್ಣ ರಾಯರ ಕೃಪೆಯಿಂದ ಆದವಾನಿಯ  ‘ನವಾಬನ’ ಆಸ್ಥಾನದಲ್ಲಿ ‘ದಿವಾನ’ನಾದನು.

ಓಂ ಶ್ರೀ ಗುರು ರಾಘವೇಂದ್ರಾಯ ನಮಃ!
ಓಂ ಶ್ರೀ ಗುರು ರಾಘವೇಂದ್ರಾಯ ನಮಃ!
ಓಂ ಶ್ರೀ ಗುರು ರಾಘವೇಂದ್ರಾಯ ನಮಃ! 🙏🙏🙏

ತುಂಗಾ ತೀರದಿ ನಿಂತ
ಸುಯತಿವರನ್ಯಾರೆ ಪೇಳಮ್ಮಾ !!

ಸಂಗೀತ ಪ್ರಿಯ ಮಂಗಳ ಸುಗುಣ ತರಂಗ
ಮುನಿ ಕುಲೋತ್ತುಂಗ ಕಾಣಮ್ಮ!!

ಚೆಲುವ ಸುಮುಖ ಫಣಿಯಲ್ಲಿ
ತಿಲಕ ನಾಮಗಳು ನೋಡಮ್ಮ
ಜಲಜಮನೆಯ ಕೊರಳಲ್ಲಿ
ತುಳಸಿ ಮಾಲೆಗಳು ಪೇಳಮ್ಮ
ಸುಲಲಿತ ಕಮಂಡಲು
ದಂಡವನೇ ಧರಿಸಿಹನೇ ನೋಡಮ್ಮ
ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ
ಪ್ರಹಲ್ಲಾದನು ತಾನಿಲ್ಲಿಹನಮ್ಮ!!

ಈದಿನ ರಾಯರ ಆರಾಧಾನೆಯ ಅಂಗವಾಗಿ ಸರ್ವರಿಗೂ ರಾಯರ ಆಶೀರ್ವಾದ ಲಭಿಸಲಿ …

Leave a Reply

Your email address will not be published. Required fields are marked *