ಹೃತಿಕ್ ರೋಷನ್ ಅವರ ‘ಕ್ರಿಶ್’ ಭಾರತೀಯ ಚಿತ್ರರಂಗದ ಮೊದಲ ಮತ್ತು ಅತ್ಯಂತ ಯಶಸ್ವಿ ಸೂಪರ್ ಹೀರೋ ಚಿತ್ರ. ‘ಕ್ರಿಶ್’ ಚಿತ್ರ ‘ಕೋಯಿ ಮಿಲ್ ಗಯಾ‘ ಚಿತ್ರದ ಮುಂದುವರಿದ ಭಾಗವಾಗಿ ಬಿಡುಗಡೆಯಾಯಿತು ಹಾಗೂ ಭಾರಿ ಯಶಸ್ಸನ್ನು ಕಂಡಿತು. ಈ ಸರಣಿಯಲ್ಲಿ ಇಲ್ಲಿಯವರೆಗೆ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಮೂರೂ ಬ್ಲಾಕ್‌ಬಸ್ಟರ್ ಹಿಟ್ ಆಗಿವೆ. ಹಾಗಾದರೆ ಈ ಸರಣಿಯ ನಾಲ್ಕನೇ ಭಾಗ ಯಾವಾಗ ಹೊರಬರುತ್ತದೆ? ಇದಕ್ಕೆ ಕೆಲವು ಅಡೆತಡೆ ಎದುರಾಗುವ ಸೂಚನೆ ಇದೆ.

ಕಳೆದ ಕೆಲವು ವರ್ಷಗಳಿಂದ ‘ಕ್ರಿಶ್ 4′ ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಕ್ರೇಜಿ ಸೀಕ್ವೆಲ್ ಇನ್ನೂ ಪ್ರಾರಂಭವಾಗಿಲ್ಲ. ‘ಕ್ರಿಶ್ 4′ ಚಿತ್ರ ಚಿತ್ರೀಕರಣ ಆರಂಭವಾಗುವ ಮುನ್ನವೇ ಹಲವು ಅಡೆತಡೆಗಳನ್ನು ಎದುರಿಸುತ್ತಿದೆ. ಹಿಂದಿನ ಕ್ರಿಶ್ ಚಲನಚಿತ್ರಗಳು 100 ಕೋಟಿಗಿಂತ ಕಡಿಮೆ ಬಜೆಟ್‌ನಲ್ಲಿ ತಯಾರಾಗುತ್ತಿದ್ದವು. ‘ಕ್ರಿಶ್ 3′ ಬಿಡುಗಡೆಯಾಗಿ 12 ವರ್ಷಗಳಾಗಿವೆ. ಈಗ ನಿರ್ಮಾಣ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ.

ಇಷ್ಟು ವರ್ಷಗಳಲ್ಲಿ, ಮಾರ್ವೆಲ್ ಮತ್ತು ಡಿಸಿಯಂತಹ ಕಂಪನಿಗಳು ತಮ್ಮ ವಿಎಫ್‌ಎಕ್ಸ್ ಅನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿವೆ. ಹಾಗಾಗಿ ಈಗ ‘ಕ್ರಿಶ್ 4’ ನಿರ್ಮಾಣವಾದರೆ, ಜನರು ಅದನ್ನು ಮಾರ್ವೆಲ್ ಸೂಪರ್ ಹೀರೋ ಸಿನಿಮಾಗಳಿಗೆ ಹೋಲಿಸುತ್ತಾರೆ. ಹಾಗಾಗಿ ‘ಕ್ರಿಶ್ 4’ ಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಬೇಕು. ವಿಎಫ್​ಎಕ್ಸ್ ಕೂಡ ಚೆನ್ನಾಗಿಯೇ ಇರಬೇಕು.

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ‘ಕ್ರಿಶ್ 4’ ಬಜೆಟ್ ಸುಮಾರು 700 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಆದರೆ ನಿರ್ಮಾಣ ಕಂಪನಿಗಳು ಅಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಲು ಹಿಂಜರಿಯುತ್ತಿವೆ. ಹಿಂದಿನ ‘ಕ್ರಿಶ್’ ಚಿತ್ರಗಳನ್ನು ಹೃತಿಕ್ ತಂದೆ ರಾಕೇಶ್ ರೋಷನ್ ನಿರ್ದೇಶಿಸಿ ನಿರ್ಮಿಸಿದ್ದರು. ಆದರೆ ‘ಕ್ರಿಶ್ 4′ ಚಿತ್ರದ ಜವಾಬ್ದಾರಿಯನ್ನು ಹೃತಿಕ್ ರೋಷನ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರಿಗೆ ವಹಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಇತ್ತೀಚಿನ ಮಾಹಿತಿಯ ಪ್ರಕಾರ, ಸಿದ್ಧಾರ್ಥ್ ಆನಂದ್ ಬಜೆಟ್ ಗಮನದಲ್ಲಿ ಇಟ್ಟುಕೊಂಡು ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸದಿರಲು ನಿರ್ಧರಿಸಿದ್ದಾರೆ. ಈ ಮೊದಲು ಅವರು ನಿರ್ದೇಶಿಸಿದ ಕೆಲ ಚಿತ್ರವನ್ನು ಅವರು ನಿರ್ಮಾಣ ಕೂಡ ಮಾಡಿದ್ದರು.

ಸಿದ್ಧಾರ್ಥ್ ಆನಂದ್ ಪ್ರಸ್ತುತ ‘ವಾರ್ 2′ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದಾದ ನಂತರ ಅವರು ಶಾರುಖ್ ಖಾನ್ ಗಾಗಿ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರಗಳ ನಂತರ ಅವರು ‘ಕ್ರಿಶ್ 4’ ಚಿತ್ರದತ್ತ ಗಮನ ಹರಿಸಲಿದ್ದಾರೆ. ಹಾಗಾಗಿ ‘ಕ್ರಿಶ್ 4’ ಕನಿಷ್ಠ ಎರಡು ವರ್ಷಗಳ ಕಾಲ ವಿಳಂಬವಾಗುವ ಸಾಧ್ಯತೆಯಿದೆ. ಅಷ್ಟೊರೊಳಗೆ ಹೊಸ ನಿರ್ಮಾಪಕರ ಹುಡುಕ ಬೇಕಿದೆ.

Leave a Reply

Your email address will not be published. Required fields are marked *