ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಫರ್ಹಾನ್ ಕಾಲಿಗೆ ಗುಂಡು ಹಾರಿಸಿರುವ ಘಟನೆ ಬೆನ್ನಲ್ಲೇ ಇದೀಗ ಹುಬ್ಬಳ್ಳಿ ಪೋಲಿಸರು ಮತ್ತೊಂದು ಪ್ರಕರಣದಲ್ಲಿ ನಟೋರಿಯಸ್ ದರೋಡೆಕೋರನ ಮೇಲೆ ಗುಂಡು ಹಾರಿಸಿದ್ದಾರೆ.

ಹೌದು, ಹುಬ್ಬಳ್ಳಿಯ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಎಮ್.ಎಸ್. ಹೂಗಾರ ಅವರೇ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಚೆನ್ನಮ್ಮ ವೃತ್ತದ ಬಳಿಯಲ್ಲಿ ಚೈನು, ಉಂಗುರು, ಫೋನ್ ಹಾಗೂ ಹಣವನ್ನು ದರೋಡೆ ಪ್ರಕರಣ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪನಗರ ಠಾಣೆಯ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ಆರೋಪಿ ಅರುಣ ಎಂಬಾತನನ್ನು ಬಂಧಿಸಿದ್ದಾರೆ.

ಅದರಂತೆ ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಮತ್ತೆ ಕೆಲವರು ಭಾಗಿಯಾಗಿರುವ ಮಾಹಿತಿಯನ್ನು ಅರುಣ್ ನೀಡುತ್ತಾನೆ. ಅದರಂತೆ ಆರೋಪಿ ಮತ್ತಿಬ್ಬರ ಮಾಹಿತಿ ನೀಡುತ್ತೇನೆಂದು ಎಂಟಿಎಸ್ ಕಾಲೋನಿಗೆ ಕರೆದುಕೊಂಡು ಹೋಗುತ್ತಾನೆ.‌

ಈ ವೇಳೆ ಆರೋಪಿ ಅರುಣ್ ಪೊಲೀಸರ ಗಮನವನ್ನು ಬೇರೆಡೆ ಸೆಳೆದು ಪರಾರಿಯಾಗಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೇ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗುತ್ತಾನೆ. ಈ ವೇಳೆ ಪರಾರಿಯಾಗುತ್ತಿದ್ದ ಆರೋಪಿ ಅರುಣ್ ಕಾಲಿಗೆ ಇನ್ಸ್ಪೆಕ್ಟರ್ ಎಮ್.ಎಸ್.ಹೂಗಾರ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಆರೋಪಿ ಕಾಲಿಗೆ ಗಾಯವಾಗಿದ್ದು, ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *