ಬೆಳಗಾವಿ : 2028ಕ್ಕೆ ನಾನೇ ಸಿಎಂ ಅಭ್ಯರ್ಥಿ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಮುಖ್ಯಮಂತ್ರಿ ಹುದ್ದೆ ಬೇಡಿಕೆ ಇಡುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರುವುದು ಎಲ್ಲರ ಜವಾಬಹ್ದಾರಿ. ನಾನು 2028ಕ್ಕೆ ಸಿಎಂ ಅಭ್ಯರ್ಥಿ ಎಂದು ಹೇಳಿದ್ದೇನೆ. ಆಗುತ್ತೇನೆಂದು ಹೇಳಿಲ್ಲ. ಸಿಎಂ ಮಾಡುವುದು, ಬಿಡುವುದು ಹೈಕಮಾಂಡ್’ಗೆ ಬಿಟ್ಟ ವಿಟಾರ. ಸರ್ಕಾರ ಅಧಿಕಾರಕ್ಕೆ ತರಲು ಎಲ್ಲರ ಪಾತ್ರ ಇದ್ದೇ ಇದೆ. ಅದರಲ್ಲಿ ನಾನೂ ಪಾಲುದಾರ, ಭಾಗಿದಾರ ಅಷ್ಟೇ ಎಂದು ಹೇಳಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗಿಗೆ ವೈಮನಸ್ಸು ಹೊಂದಿದ್ದಾರೆಂಬ ಸುದ್ದಿಗಳ ಕುರಿತು ಮಾತನಾಡಿದ ಅವರು, ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಸೇರಿ ಅತ್ಯಂತ ಯಶಸ್ವಿ ಕಾರ್ಯಕ್ರಮ ಮಾಡಿದ್ದೇವೆ. ಮುನಿಸು ಎನ್ನುವ ಪ್ರಶ್ನೆಯೇ ಬರುವುದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಪ್ರಶ್ನೆಗೆ ಹೈಕಮಾಂಡ್ ಉತ್ತರಿಸಬೇಕು. ಅದರ ಬಗ್ಗೆ ಏನನ್ನೂ ಹೇಳುವ ಅಧಿಕಾರ ನನಗಿಲ್ಲ ಎಂದರು.