ನವದೆಹಲಿ : ಬೆಂಗಳೂರಿನಲ್ಲಿ ಸ್ಥಾಪನೆ ಆಗಲಿರುವ ಈ ಕೇಂದ್ರವು ಎಲೆಕ್ಟ್ರಿಕ್ ವಾಹನ (ಇವಿ) ತಂತ್ರಜ್ಞಾನ, ಸಾಫ್ಟ್‌ವೇರ್ ನಿಯಂತ್ರಿತ ವಾಹನಗಳು (ಎಸ್‌ಡಿವಿಗಳು), ಸ್ವಾಯತ್ತ ವ್ಯವಸ್ಥೆಗಳು ಮತ್ತು ದತ್ತಾಂಶ ಸುರಕ್ಷತೆಯಲ್ಲಿ ಐಕ್ಯಾಟ್ ಕೇಂದ್ರವು ನಿರ್ಣಾಯಕವಾಗಿ ಕೆಲಸ ಮಾಡುತ್ತದೆ. ಕೇಂದ್ರವು ಬೆಂಗಳೂರಿನಲ್ಲಿ ಸ್ಥಾಪನೆ ಆಗುವುದರಿಂದ ಕರ್ನಾಟಕದ ಜತೆಗೆ ಅದರ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಅಟೋಮೊಬೈಲ್ ಆವಿಷ್ಕಾರಕ್ಕೆ ಭಾರೀ ಪ್ರಮಾಣದ ಉತ್ತೇಜನ ದೊರೆಯಲಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಐಕ್ಯಾಟ್ ಕೇಂದ್ರದಲ್ಲಿನ ಚಟುವಟಿಕೆಗಳ ಬಗ್ಗೆ ಹೆಚ್‌ಡಿಕೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಆ ನಂತರ ಇಡೀ ಕೇಂದ್ರದ ಪ್ರಯೋಗಾಲಯಗಳು, ಅಪಘಾತ ಪರೀಕ್ಷೆ ಪ್ರಯೋಗಾಲಯಗಳು, ಪ್ರತಿಧ್ವನಿ ಅಧ್ಯಯನ ಕೇಂದ್ರಗಳು ಹಾಗೂ ಇಂಧನ ಹರಿವಿನ ಪರೀಕ್ಷಾ ಕಾರ್ಯವಿಧಾನಗಳನ್ನು ಸಚಿವರು ಪರಿಶೀಲನೆ ವೀಕ್ಷಿಸಿದರು. ಎರಡು ಕೇಂದ್ರಗಳಿಗೆ ಭೇಟಿ ನೀಡಿದ ಸಚಿವರು, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನದ ನೆಲೆವೀಡಾದ ಬೆಂಗಳೂರಿನಲ್ಲಿ ಇದರ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಐಕ್ಯಾಟ್‌ನ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಐಕ್ಯಾಟ್ ಕೇಂದ್ರ ಸ್ಥಾಪನೆಗೆ ಕೇಂದ್ರದ ಬೃಹತ್ ಕೈಗಾರಿಕೆ ಸಚಿವಾಲಯದಿಂದ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಹಾಗೂ ಅದೇ ರೀತಿ ಕರ್ನಾಟಕ ಸರ್ಕಾರದಿಂದ ಸಿಗಬೇಕಿರುವ ಅನುಕೂಲಗಳನ್ನು ಒದಗಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಐಕ್ಯಾಟ್ ನಿರ್ದೇಶಕರಿಗೆ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಐಕ್ಯಾಟ್ ನ ಮೂರನೇ ಕೇಂದ್ರ ಬಂದರೆ ಅಟೋಮೊಬೈಲ್ ಕ್ಷೇತ್ರಕ್ಕೆ ಮಾತ್ರವಷ್ಟೇ ಅಲ್ಲದೇ, ರಕ್ಷಣೆ ಮತ್ತು ರೇಲ್ವೆ ಕ್ಷೇತ್ರಗಳಿಗೂ ಹೆಚ್ಚು ಉಪಯೋಗ ಆಗುತ್ತದೆ. ಹೊಸ ಅವಕಾಶದ ಬಾಗಿಲುಗಳನ್ನು ತೆರೆಯುತ್ತದೆ. ಅಟೋಮೊಬೈಲ್ ತಂತ್ರಜ್ಞಾನದ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಸಚಿವರು ಹೇಳಿದರು.
ಐಕ್ಯಾಟ್ 3ನೇ ಕೇಂದ್ರದ ವೈಶಿಷ್ಟ್ಯಗಳು?
- ಐಕ್ಯಾಟ್ 3ನೇ ಕೇಂದ್ರ ಕೇವಲ ಒಂದು ತಂತ್ರಜ್ಞಾನ ಆಧಾರಿತ ಕೇಂದ್ರವಷ್ಟೇ ಆಗಿರದೇ, ಒಟ್ಟಾರೆ ಆರ್ಥಿಕತೆ ಮೇಲೆ ಪ್ರತಿಕೂಲಕರ ಪ್ರಭಾವ ಬೀರುತ್ತದೆ.
- ಸುಧಾರಿತ ಎಲೆಕ್ಟ್ರಿಕ್ ತಂತ್ರಜ್ಞಾನ ಅಭಿವೃದ್ಧಿ ಮತ್ತು ಮಾಪನಾಂಕ ನಿರ್ಣಯದ ಪ್ರಯೋಗಾಲಯಗಳನ್ನು ಹೊಂದಿರುತ್ತದೆ.
- ಎಲೆಕ್ಟ್ರಾನಿಕ್ ನಿಯಂತ್ರಿತ ವ್ಯವಸ್ಥೆ (ECU) ಹಾಗೂ ಸೆನ್ಸಾರ್ ತಂತ್ರಜ್ಞಾನ ಅಭಿವೃದ್ಧಿ ವ್ಯವಸ್ಥೆ ಹೊಂದಿರುತ್ತದೆ.
- ಸೈಬರ್ ಸುರಕ್ಷತೆ ಲ್ಯಾಬ್‌ಗಳು ಮತ್ತು ಅತ್ಯಾಧುನಿಕ ಚಾಲನಾ ನೆರವು ವ್ಯವಸ್ಥೆ (ADAS) ಸಂಶೋಧನೆ ವ್ಯವಸ್ಥೆ ಹೊಂದಿರುತ್ತದೆ.
- ಸಂಪರ್ಕಿತ ಮತ್ತು ಸ್ವಾಯತ್ತ ಇಲ್ಲವೇ ಏಕೀಕೃತ ನಿಯಂತ್ರಣ ವ್ಯವಸ್ಥೆಯುಳ್ಳ ವಾಹನ ತಂತ್ರಜ್ಞಾನಗಳಿಗೆ ಸೌಲಭ್ಯಗಳನ್ನು ಹೊಂದಿರುತ್ತದೆ.
- ಸಾಫ್ಟ್‌ವೇರ್ ಆಧಾರಿತ ಅಥವಾ ನಿಯಂತ್ರಿತ ವಾಹನಗಳ (SDVs) ಸಾಫ್ಟ್‌ವೇರ್ ಪರೀಕ್ಷೆ ಮತ್ತು ಅಭಿವೃದ್ಧಿಯನ್ನು ಮಾಡುತ್ತದೆ.
- ಮಹತ್ವದ್ದಾದ ಆಟೋಮೋಟಿವ್ ದತ್ತಾಂಶವನ್ನು ಸುರಕ್ಷಿತವಾಗಿ ಕಾಪಾಡುವ ವ್ಯವಸ್ಥೆಯನ್ನು ಹೊಂದಿರುತ್ತದೆ.
ಪ್ರಧಾನಿಗಳ ಆತ್ಮನಿರ್ಭರ್ ಭಾರತ್ ಹಾಗೂ ಮೆಕ್ ಇನ್ ಇಂಡಿಯಾ ಮೂಲಕ ವಿಕಸಿತ ಭಾರತದ ಕನಸು ಸಾಕಾರಕ್ಕೆ ಐಕ್ಯಾಟ್ ನ ಎರಡು ಕೇಂದ್ರಗಳ ಕೊಡುಗೆ ದೊಡ್ಡದು. ಅದೇ ರೀತಿ ಬೆಂಗಳೂರಿನಲ್ಲಿ ಮೂರನೇ ಅತಿದೊಡ್ಡ ಕೇಂದ್ರ ಸ್ಥಾಪನೆಯಾದರೆ ರಾಜ್ಯಕ್ಕೆ ಹೆಚ್ಚು ಅನುಕೂಲ ಆಗುವುದು ಮಾತ್ರವಲ್ಲದೇ, ದಕ್ಷಿಣದ ರಾಜ್ಯಗಳಲ್ಲಿ ಆಟೋಮೊಟೀವ್ ತಂತ್ರಜ್ಞಾನದ ಬೃಹತ್ ಕ್ರಾಂತಿಯೇ ಆಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಭಾರತದ ವಾಹನಗಳ ಉತ್ಕೃಷ್ಟತೆಗೆ ಐಕ್ಯಾಟ್ ಕೇಂದ್ರ ಅತಿದೊಡ್ಡ ಕೊಡುಗೆ ನೀಡುತ್ತಿದೆ. ಆವಿಷ್ಕಾರ, ನಾವೀನ್ಯತೆ ಕ್ಷೇತ್ರಗಳಿಗೆ ಇದು ಹೆಚ್ಚು ಆದ್ಯತೆ ಕೊಡುತ್ತಿದೆ. ಇಲ್ಲಿಗೆ ಬಂದಿರುವುದು ನನಗೆ ಬಹಳ ಸಂತೋಷ ತಂದಿದೆ. ಇಲ್ಲಿನ ಸುಧಾರಿತ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಮೂಲಸೌಕರ್ಯಗಳನ್ನು ಒಳಗೊಂಡಂತೆ ICATನ ಅತ್ಯಾಧುನಿಕ ಸೌಲಭ್ಯಗಳು ಆಟೋಮೋಟಿವ್ ನಾವೀನ್ಯತೆಯಲ್ಲಿ ಭಾರತದ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿವೆ ಎಂದರು.