ನವದೆಹಲಿ : ಬೆಂಗಳೂರು ನಗರದಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ – ಐಕ್ಯಾಟ್‌ನ 3ನೇ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಹರಿಯಾಣದ ಗುರುಗ್ರಾಮದಲ್ಲಿರುವ ಐಕ್ಯಾಟ್ (ICAT- The International Centre for Automotive Technology)ನ ಎರಡು ಕೇಂದ್ರಗಳಿಗೆ ಭೇಟಿ ನೀಡಿದ ಸಚಿವರು, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನದ ನೆಲೆವೀಡಾದ ಬೆಂಗಳೂರಿನಲ್ಲಿ ಇದರ ಮೂರನೇ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಐಕ್ಯಾಟ್‌ನ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಅಲ್ಲದೇ, ದಕ್ಷಿಣದಲ್ಲಿಯೇ ಅತ್ಯಂತ ಆಯಕಟ್ಟಿನ ಹಾಗೂ ವ್ಯೂಹಾತ್ಮಕ ನಗರವೂ ಆಗಿರುವ ಬೆಂಗಳೂರಿನಲ್ಲಿ ಐಕ್ಯಾಟ್ ನ ಹೊಸ ಕೇಂದ್ರ ಬರುವುದು ಅತ್ಯಗತ್ಯವಾಗಿದೆ. ನಾವೀನ್ಯತೆ, ಆವಿಷ್ಕಾರ ಹಾಗೂ ಉದ್ಯಮಶೀಲತೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಅಟೋಮೊಬೈಲ್ ಕ್ಷೇತ್ರದ ಹಬ್ ಆಗಿಯೂ ಬೆಳೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಐಕ್ಯಾಟ್ ಕೇಂದ್ರ ಸ್ಥಾಪನೆ ಬಗ್ಗೆ ಕೇಂದ್ರದ ನಿರ್ದೇಶಕ ಸೌರಭ್ ದಲೇಲ ಅವರೊಂದಿಗೆ ಚರ್ಚಿಸಿದರು. ಬೆಂಗಳೂರಿನಲ್ಲಿ ಆದಷ್ಟು ಬೇಗ ಐಕ್ಯಾಟ್ ಕೇಂದ್ರ ಆರಂಭ ಮಾಡುವ ಬಗ್ಗೆ ಪ್ರಕ್ರಿಯೆಗಳನ್ನು ಆರಂಭ ಮಾಡುವುದಾಗಿ ಅಧಿಕಾರಿಗಳು ಸಚಿವರಿಗೆ ಸ್ಪಷ್ಟ ಭರವಸೆ ನೀಡಿದರು.