ಬೆಂಗಳೂರು : ಸಾಧು ಸಂತರೊಂದಿಗೆ ಸೇರಿಕೊಂಡು ಕ್ರಾಂತಿವೀರ ಬ್ರಿಗೇಡ್ ಶುರು ಮಾಡಿದ್ದೇವೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ, ಫೆ.4 ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಆಗಲಿದೆ. ಇದು ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾ ಕಾರ್ಯಕ್ರಮ ನಡೆಯಲಿದೆ. ಹಿಂದೂ ಧರ್ಮ ರಕ್ಷಣೆ ಮಾಡಲು ಹಿಂದೂಗಳು ಒಂದಾಗಬೇಕು. ಹಿಂದೂಗಳು ಒಂದಾಗದಿದ್ದರೆ ಬಹಳ ಕಷ್ಟ. 1008 ಮಠಾಧೀಶರ ಪಾದಪೂಜೆಯೊಂದಿಗೆ ಉದ್ಘಾಟನೆ ಆಗಲಿದೆ. ಹಿಂದೂ ಧರ್ಮದ ಒಳಿತಿಗಾಗಿ ಕ್ರಾಂತಿವೀರ ಬ್ರಿಗೇಡ್ ಕೆಲಸ ಮಾಡಲಿದೆ ಎಂದರು.
ಹಿಂದುಳಿದವರು ಮತ್ತು ದಲಿತರಿಗೆ ಬೆಂಬಲ ಸಮಾಜದಿಂದಲೂ, ಸರ್ಕಾರದಿಂದಲೂ ಸಿಗುತ್ತಿಲ್ಲ. ಯಾರಿಗೆ ಅನ್ಯಾಯ ಆಗಿದೆಯೋ ಅಲ್ಲಿ ಕ್ರಾಂತಿವೀರ ಬ್ರಿಗೇಡ್ ನಿಲ್ಲಲಿದೆ. ಸ್ವಾಮೀಜಿಗಳು ತೀರ್ಮಾನ ತೆಗೆದುಕೊಂಡಾಗ ನಾವು ಪೂರ್ಣ ಬೆಂಬಲ ನೀಡಿದ್ದೇವೆ. ಬಸವರಾಜ ಬಾಳೇಕಾಯಿ ಬ್ರಿಗೇಡ್ ಅಧ್ಯಕ್ಷರಾಗಿ, ಕೆ.ಇ. ಕಾಂತೇಶ್ ಕಾರ್ಯಾಧ್ಯಕ್ಷರಾಗಿ ಇರುತ್ತಾರೆ. ನಾನು ಮತ್ತು ಗೂಳಿ ಹಟ್ಟಿ ಶೇಖರ್ ಬ್ರಿಗೇಡ್‌ನ ಸಂಚಾಲಕರಾಗಿರುತ್ತೇವೆ.
ಸಕಲ ಹಿಂದೂ ಸಮಾಜದ ರಕ್ಷಣೆಗೆ ಈ ಬ್ರಿಗೇಡ್ ಕೆಲಸ ಮಾಡಲಿದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಗೋಶಾಲೆ ಘೋಷಣೆ ಆಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಈ ಆದೇಶವನ್ನು ರದ್ದು ಮಾಡಿತು. ಸರ್ಕಾರದಲ್ಲಿ ಹಿಂದೂ ವಿರೋಧಿ ಕೆಲಸಗಳು ಆಗುತ್ತಿವೆ. ಧರ್ಮಸ್ಥಳದಲ್ಲಿ ನೇತ್ರಾವತಿ ನದಿಗೆ ತಲೆಕಡಿದ ಹಸು, ಹಸುವಿನ ರಕ್ತ ಬಂದು ಬೀಳುತ್ತಿದೆ. ವಕ್ಫ್ ಆಸ್ತಿ ಅಂತಾ ಪಹಣಿಯಲ್ಲಿ ಸೇರಿದ್ದನ್ನು ಒಂದಾದರೂ ವಾಪಸ್ ಪಡೆದಿದ್ದಾರಾ ಎಂದು ಪ್ರಶ್ನಿಸಿ ಕಿಡಿಕಾರಿದರು.