ನವದೆಹಲಿ : ಪ್ರಧಾನಿ ಮೋದಿ ಇಂದು ದೆಹಲಿ ಮೆಟ್ರೋದ ನಾಲ್ಕನೇ ಹಂತ ಜನಕಪುರಿ ಮತ್ತು ಕೃಷ್ಣಾ ಪಾರ್ಕ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಸುಮಾರು 1,200 ಕೋಟಿ ರೂ. ಮೌಲ್ಯದ ಯೋಜನೆ ಇದಾಗಿದೆ. ಇದೇ ವೇಳೆ, ದೆಹಲಿ ಮೆಟ್ರೋ 4ನೇ ಹಂತದ 26.5 ಕಿಲೋಮೀಟರ್ ರಿಥಾಲಾ-ಕುಂಡ್ಲಿ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಾರೆ. ಇದರ ಅಂದಾಜು ವೆಚ್ಚ 6,230 ಕೋಟಿ ರೂ. ಆಗಿದೆ. ಹೊಸ ಕಾರಿಡಾರ್ ದೆಹಲಿಯ ರಿಥಾಲಾವನ್ನು ಹರಿಯಾಣದ ನಾಥುಪುರ್‌ಗೆ ಸಂಪರ್ಕಿಸುತ್ತದೆ.

ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ 23 ನಗರಗಳಲ್ಲಿ ಒಟ್ಟು 1000 ಕಿಮೀನಷ್ಟು ಮೆಟ್ರೋ ರೈಲು ಸಂಚರಿಸುತ್ತಿದೆ. ಈ ಮೂಲಕ ಭಾರತವು ವಿಶ್ವದ 3ನೇ ಅತಿದೊಡ್ಡ ಮೆಟ್ರೋ ಮಾರ್ಗ ಹೊಂದಿದ ದೇಶವಾಗಿ ಹೊರಹೊಮ್ಮಿದೆ. ಚೀನಾ ಮತ್ತು ಅಮೆರಿಕದ ನಂತರ ಭಾರತ ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ರೈಲು ಮಾರ್ಗವನ್ನು ಹೊಂದಿರುವ ದೇಶವಾಗಿದೆ.

2014ರಲ್ಲಿ ದೇಶದ ಐದು ನಗರಗಳಲ್ಲಿ 248 ಕಿಮೀ ಮಾತ್ರ ಮೆಟ್ರೋ ರೈಲು ಸಂಚರಿಸುತ್ತಿತ್ತು. 10 ವರ್ಷಗಳ ನಂತರ ಅಂದರೆ 2025ರ ಹೊತ್ತಿಗೆ ನಾಲ್ಕು ಪಟ್ಟು ಹೆಚ್ಚಾಗಿದ್ದು, 23 ನಗರಗಳಲ್ಲಿ 1000 ಕಿಮೀ ಮೆಟ್ರೋ ರೈಲು ಸಂಚರಿಸುತ್ತಿದೆ. 26 ನಗರಗಳಲ್ಲಿ 1000 ಕಿಮೀ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ.

ಪ್ರಧಾನಿ ಮೋದಿ ಒಟ್ಟು 12,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದು, ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಭಾರತದಲ್ಲಿ ಮೆಟ್ರೊ ನಿರ್ಮಾಣಕ್ಕೆ ಪ್ರತಿ ಕಿಲೋಮೀಟರ್‌ಗೆ ಸರಾಸರಿ 407 ಕೋಟಿ ರೂ. ತಗಲುತ್ತದೆ ಎಂದು ವರದಿಯಾಗಿದೆ. ಭಾರತೀಯ ಮೆಟ್ರೋಗಳಲ್ಲಿ ಪ್ರತಿದಿನ 10 ಮಿಲಿಯನ್ ಪ್ರಯಾಣಿಕರು ಸಂಚರಿಸುತ್ತಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *