ಬೆಂಗಳೂರು : ರಾಜ್ಯದಲ್ಲಿ ಹಕ್ಕಿ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಆರೋಗ್ಯ ಇಲಾಖೆ ಈ ಸಂಬಂಧ ಮಾರ್ಗ ಸೂಚಿ ಹೊರಡಿಸಿದ್ದು, ರೋಗ ಪತ್ತೆಯಾದ ಸ್ಥಳದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಳಿಗಳನ್ನು ಕೊಂದು ಹೂಳುವಂತೆ ಸೂಚನೆ ನೀಡಿದೆ. ಒಂದು ವೇಳೆ ರಾಜ್ಯದ ಇತರೆಡೆ ಕೂಡ ಹಕ್ಕಿ ಜ್ವರ ಹಬ್ಬಿದ್ದರೂ ಅಲ್ಲಿಯೂ ಇದೇ ಮಾರ್ಗಸೂಚಿ ಅನ್ವಯವಾಗುವ ಸಾಧ್ಯತೆಗಳಿವೆ.
ಮಾರ್ಗಸೂಚಿ ಬಿಡುಗಡೆ – ಹಕ್ಕಿ ಜ್ವರ ಕಂಡುಬಂದ ಸ್ಥಳದ 3 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ. ಈ ವ್ಯಾಪ್ತಿಯಲ್ಲಿ ಯಾರೂ ಓಡಾಡುವಂತಿಲ್ಲ. ಹಕ್ಕಿ ಜ್ವರ ಕಂಡು ಬಂದ 10 ಕಿಲೋ ಮೀಟರ್ ವ್ಯಾಪ್ತಿ ಸರ್ವಲೆನ್ಸ್ ಸ್ಥಳ ಎಂದು ಘೋಷಣೆ ಮತ್ತು ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲಾಗುತ್ತದೆ.
ಮಾಂಸ ಸಂಪೂರ್ಣವಾಗಿ ಬೇಯಿಸಿಯೇ ತಿನ್ನಬೇಕು. ಅರಬರೆ ಬೇಯಿಸಿದ ಮತ್ತು ಹಸಿ ಮಾಂಸ ತಿನ್ನುವಂತಿಲ್ಲ. ಪೌಲ್ಟ್ರಿಯಲ್ಲಿ ಕೆಲಸ ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕು. ಕೋಳಿ ಮಾಂಸ ಕತ್ತರಿಸುವಾಗ ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯವಾಗಿದೆ.
ಹಕ್ಕಿಗಳು, ಕೋಳಿಗಳ ಜೊತೆ ಇರುವವರಿಗೆ ಔಷಧ ನೀಡಬೇಕು. ಹಕ್ಕಿ ಜ್ವರದ ಗುಣಲಕ್ಷಣ ಇರುವವರಿಗೆ RTPCR ಟೆಸ್ಟ್ ಕಡ್ಡಾಯ ಹಾಗೂ ಹಕ್ಕಿ ಜ್ವರ ಬಂದವರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ತೆರೆಯಬೇಕು. ರೋಗ ಪತ್ತೆಯಾದ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿನ ಎಲ್ಲ ಕೋಳಿಗಳನ್ನು ಕೊಂದು ಹೂಳುವಂತೆ ತಿಳಿಸಿದೆ.