ನವದೆಹಲಿ : ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲು ನಡೆಯುತ್ತಿರುವ ಮಾತುಕತೆ ಮತ್ತು ಸಂಧಾನ ಸದ್ಯದಲ್ಲೇ ತಾರ್ಕಿಕ ಅಂತ್ಯ ಮುಟ್ಟಬಹುದು. ಜುಲೈ 9ರೊಳಗೆ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ.
ಜುಲೈ 9ರೊಳಗೆ ಈ ಡೀಲ್ ಮುಗಿಸಲು ಭಾರತ ಆತುರಪಡಲು ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಡೆಡ್ಲೈನ್ ಕೂಡ ಒಂದು ಕಾರಣ. ತೆರಿಗೆ ಹೇರಿಕೆಯಿಂದ ವಿನಾಯಿತಿ ನೀಡಲಾಗಿದ್ದ 90 ದಿನಗಳ ಕಾಲಾವಕಾಶವು ಜುಲೈ 9ಕ್ಕೆ ಮುಗಿಯುತ್ತದೆ. ಈ ವಿನಾಯಿತಿಯನ್ನು ಮುಂದುವರಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದರು. ಹೀಗಾಗಿ, ಅಷ್ಟರೊಳಗೆ ಅಮೆರಿಕದೊಂದಿಗೆ ಒಪ್ಪಂದ ಅಂತಿಮಗೊಳಿಸುವ ಗುರಿ ಭಾರತದ್ದಾಗಿದೆ.
ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ಭಾರತದ ವಾಣಿಜ್ಯ ಇಲಾಖೆ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ನೇತೃತ್ವದ ಭಾರತೀಯ ತಂಡವೊಂದು ಅಮೆರಿಕದಲ್ಲಿದೆ.
ಅಮೆರಿಕದಲ್ಲಿ ಈ ಕುರಿತು ಮಾತನಾಡಿರುವ ರಾಜೇಶ್ ಅಗರ್ವಾಲ್, ಈ ಒಪ್ಪಂದದಲ್ಲಿ ಭಾರತದ ಕೃಷಿ ವಲಯವನ್ನು ರಕ್ಷಿಸಲಾಗುವುದು ಎಂದಿದ್ದಾರೆ. ಕೆಲ ಸೆಕ್ಟರ್ಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಸರಕುಗಳಿಗೂ ಟ್ಯಾರಿಫ್ ತಡೆಯನ್ನು ನಿವಾರಿಸುವ ಅಥವಾ ಕಡಿಮೆ ಮಾಡುವ ಸಾಧ್ಯತೆಯ ಸುಳಿವು ಇದೆ.
ಭಾರತದ ಪ್ರಮುಖ ರಫ್ತು ಮಾರುಕಟ್ಟೆಗಳಲ್ಲಿ ಅಮೆರಿಕವೂ ಒಂದು. ಹೀಗಾಗಿ, ಭಾರತ ಟ್ಯಾರಿಫ್ ಹೇರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವುದು ಬಹುತೇಕ ಅನಿವಾರ್ಯವಾಗಿದೆ.
ವಿವಿಧ ದೇಶಗಳು ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬೇಕು ಎನ್ನುವುದು ಡೊನಾಲ್ಡ್ ಟ್ರಂಪ್ ನಿರೀಕ್ಷೆಯಾಗಿದೆ. ಏಪ್ರಿಲ್ನಲ್ಲಿ ಅವರು ಭಾರತವನ್ನೂ ಒಳಗೊಂಡಂತೆ ಬಹುತೇಕ ಎಲ್ಲಾ ದೇಶಗಳ ಮೇಲೂ ದೊಡ್ಡ ಮಟ್ಟದಲ್ಲಿ ಆಮದು ಸುಂಕ ವಿಧಿಸಿದ್ದರು. ಕೆಲ ದಿನಗಳ ಬಳಿಕ ಅವರು 90 ದಿನಗಳ ವಿರಾಮ ಪ್ರಕಟಿಸಿದ್ದರು. ಈ ಗಡುವು ಜುಲೈ 9ಕ್ಕೆ ಮುಗಿಯುತ್ತದೆ. ಗಡುವನ್ನು ವಿಸ್ತರಿಸುವುದಿಲ್ಲ ಎಂದು ಟ್ರಂಪ್ ಬಾರಿ ಬಾರಿ ಹೇಳುತ್ತಿದ್ದಾರೆ.
‘ಒಂದು ದೇಶವು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತದೆ, ಅವರು ಒಳ್ಳೆಯವರಾ, ಅಲ್ಲವಾ ಎಂದು ನೋಡುತ್ತೇವೆ. ಕೆಲ ದೇಶಗಳ ಮೇಲೆ ನಮಗ್ಯಾವ ಕಾಳಜಿಯೂ ಇರುವುದಿಲ್ಲ. ಅಧಿಕ ಸಂಖ್ಯೆ (ಟ್ಯಾರಿಫ್) ಕಳುಹಿಸುತ್ತೇವೆ’ ಎಂದು ಫಾಕ್ಸ್ ನ್ಯೂಸ್ ವಾಹಿನಿ ಜೊತೆ ಟ್ರಂಪ್ ತಿಳಿಸಿದ್ದಾರೆ.