ದುಬೈ : ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿಂದು ಭಾರತ ಪಡೆ ನ್ಯೂಜಿಲೆಂಡ್ ತಂಡವನ್ನ ಇಂದು ಎದುರಿಸಲಿದೆ. 25 ವರ್ಷಗಳ ಬಳಿಕ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದು, ವಿಶ್ವ ಕ್ರಿಕೆಟ್ ಚಾಂಪಿಯನ್‌ಶಿಪ್‌ಗಾಗಿ ಎರಡು ತಂಡಗಳು ಸೆಣಸಾಡಲಿವೆ.

ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದ್ದು, ಟಾಸ್ ಕೂಡ ಪ್ರಮುಖ ಪಾತ್ರ ವಹಿಸಲಿದೆ. ಭಾರತ 3ನೇ ಬಾರಿ ಕಪ್ ಗೆಲ್ಲಲಿ ಅಂತ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

ಇಡೀ ವಿಶ್ವದ ಚಿತ್ತವೇ ಇವತ್ತು ದುಬೈನತ್ತ ನೆಟ್ಟಿದೆ. ಚಾಂಪಿಯನ್ಸ್ ಪಟ್ಟಕ್ಕಾಗಿ ಇಂದು ದುಬೈ ರಣಾಂಗಣದಲ್ಲಿ ಮಹಾಕದನವೇ ನಡೆಯಲಿದೆ. ಒಂದೆಡೆ ಸೋಲಿಗೆ ಪ್ರತೀಕಾರವಾದರೆ, ಮತ್ತೊಂದೆಡೆ 12 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಲು ಟೀ ಇಂಡಿಯಾ ಸನ್ನದ್ಧವಾಗಿದೆ.

ಬರೋಬ್ಬರಿ 25 ವರ್ಷಗಳ ಬಳಿಕ ಸೀಮಿತ ಓವರ್‌ಗಳ ಐಸಿಸಿ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮಖಾಮುಖಿಯಾಗ್ತಿವೆ. ಎರಡು ಬಲಿಷ್ಠ ಪಡೆಗಳ ಗುರಿ ಒಂದೇ ಅದು ಚಾಂಪಿಯನ್ಸ್ ಪಟ್ಟ. ಗೆದ್ದು ಇತಿಹಾಸ ನಿರ್ಮಾಣಕ್ಕೆ ಎರಡು ತಂಡಗಳು ತುದಿಗಾಲಲ್ಲಿ ನಿಂತಿವೆ.

ಸೆಮಿಫೈನಲ್‌ನಲ್ಲಿ ಒಂದು ಕಡೆ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಅಧಿಕಾರಯುತ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟರೆ, ಮತ್ತೊಂದು ಕಡೆ ಟೀಂ ಇಂಡಿಯಾ ದುಬೈನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 4 ವಿಕೆಟ್ ರೋಚಕ ಗೆಲುವು ಸಾಧಿಸಿದೆ.

ಈ ಗೆಲುವು ಎರಡು ತಂಡಗಳ ಮನೋಬಲ ಹೆಚ್ಚಿಸಿರೋದು ಸುಳ್ಳಲ್ಲ. ಇಂದಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್. ಇಡೀ ಟೂರ್ನಿಯನ್ನ ಒಂದೇ ಮೈದಾನದಲ್ಲಿ ಆಡಿರುವ ಭಾರತ ತಂಡಕ್ಕೆ ಪಿಚ್ ಹೆಚ್ಚು ಅನೂಕೂಲವಾಗುವ ಸಾಧ್ಯತೆ ಇದೆ. ಜೊತೆಗೆ ಲೀಗ್ ಹಂತದಲ್ಲಿ ಇದೇ ಮೈದಾನದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನ 44 ರನ್‌ಗಳಿಂದ ಮಣಿಸಿತ್ತು. ಸದ್ಯಕ್ಕೆ ಭಾರತ ತಂಡದ ಎಲ್ಲಾ ವಿಭಾಗವು ಅದ್ಭುತ ಪ್ರದರ್ಶನ ತೋರುತ್ತಿದೆ.

ಬ್ಯಾಟಿಂಗ್ ವಿಭಾಗದಲ್ಲಿ ಕಳೆದ ಪಂದ್ಯದಲ್ಲಿ ಮಿಂಚಿದ್ದ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು. ಕಳೆದ ಪಂದ್ಯದಲ್ಲಿ ಲಯ ಕಳೆದುಕೊಂಡಿದ್ದ ರೋಹಿತ್ ಶರ್ಮಾ ಮತ್ತು ಗಿಲ್ ಕ್ಲಿಕ್ ಆದರೆ, ಕಿವೀಸ್ ಪಡೆ ಬೌಲರ್‌ಗಳ ಬೆಂಡೆತ್ತಬಹುದು.

ಇನ್ನೂ ಬೌಲಿಂಗ್ ವಿಭಾಗಕ್ಕೆ ಬರುವುದಾದರೆ, ಪಿಚ್ ಕೊಂಚ ಸ್ಪಿನ್ನರ್ ಸ್ನೇಹಿ. ಅದೇ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ಸ್ನಲ್ಲಿ ಇಬ್ಬರು ಫಾಸ್ಟ್ ಬೌಲರ್ ಜೊತೆ ನಾಲ್ವರು ಸ್ಪಿನ್ನರ್‌ಗಳು ಕಣಕಿಳಿದಿದ್ದರು. ಇಂದು ಕೂಡ ಅದೇ ಬೌಲಿಂಗ್ ಪಡೆ ಕಣಕ್ಕಿಳಿಯುವ ಸಾಧ್ಯತೆ ಇದೆ.

ಶಮಿ, ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಭರ್ಜರಿ ಫಾರ್ಮ್ನಲ್ಲಿದ್ದು, ಕಿವೀಸ್‌ಗೆ ತಲೆನೋವಾಗಬಹುದು. ನ್ಯೂಜಿಲೆಂಡ್ ಕೂಡ ಕಡಿಮೆ ಇಲ್ಲ. ಸೆಮಿಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಬ್ಯಾಟಿಂಗ್‌ನಲ್ಲಿ ರಚಿನ್ ರವೀಂದ್ರ, ಕಾನ್ವೆ, ಕೇನ್ ವಿಲಿಯಮ್ಸ್, ಮಿಚೆಲ್ ಕೊಂಚ ಕಾಡಬಹುದು ಎನ್ನಲಾಗಿದೆ.

Leave a Reply

Your email address will not be published. Required fields are marked *