ಮುಂಬೈ: ಐಪಿಎಲ್ನಲ್ಲಿ (IPL 2023) ನೋಬಾಲ್ ವಿವಾದಗಳು (Noball Controversy) ಆಗಾಗ್ಗೆ ನಡೆಯುತ್ತಲೇ ಇವೆ. 16ನೇ ಆವೃತ್ತಿಯಲ್ಲೂ ಭಾನುವಾರ (ಏ.30) ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಶತಕ ಸಿಡಿಸಿದ ರಾಜಸ್ಥಾನ್ ತಂಡದ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಔಟಾದ ರೀತಿ ವಿವಾದಕ್ಕೆ ಕಾರಣವಾಗಿದೆ.
ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ 62 ಎಸೆತಗಳಲ್ಲಿ 16 ಬೌಂಡರಿ, 8 ಸಿಕ್ಸರ್ ನೊಂದಿಗೆ 124 ರನ್ ಚಚ್ಚಿದರು. ಕೊನೆಯ ಓವರ್ನಲ್ಲಿ ಮುಂಬೈ ಬೌಲರ್ ಅರ್ಶದ್ ಖಾನ್ ಎಸೆದ 4ನೇ ಎಸೆತದಲ್ಲಿ ಯಶಸ್ವಿ ಕ್ಯಾಚ್ ನೀಡಿ ಔಟಾದರು. ಈ ಔಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಏಕೆಂದರೆ ಯಶಸ್ವಿ ಜೈಸ್ವಾಲ್ ಎದುರಿಸಿದ 20ನೇ ಓವರ್ನ 4ನೇ ಎಸೆತವು ಸೊಂಟಕ್ಕಿಂತಲೂ ಮೇಲ್ಭಾಗಕ್ಕೆ ಬಂದಿತ್ತು. ಯಶಸ್ವಿ ಕ್ರೀಸ್ ಒಳಗೆಯೇ ನಿಂತು ಬ್ಯಾಟಿಂಗ್ ಮಾಡಿದ್ದರು. ಡಿಆರ್ಎಸ್ನಲ್ಲೂ ಸ್ಕ್ರೀನ್ನಲ್ಲೂ ಬಾಲ್ ವಿಕೆಟ್ನಿಂದ ಮೇಲೆ ಇರುವುದು ಕಂಡುಬಂದಿತ್ತು. ಆದರೂ ಅಂಪೈರ್ ಔಟ್ ಎಂದೇ ತೀರ್ಪು ನೀಡಿದರು. ಅಂಪೈರ್ ತೀರ್ಪಿನ ವಿರುದ್ಧ ಇದೀಗ ಕ್ರಿಕೆಟ್ ಅಭಿಮಾನಿಗಳು ಸಿಡಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: IPLನಲ್ಲಿ ನಂ.1 ಪಟ್ಟ ಕಳೆದುಕೊಳ್ಳದ RCB – ರನ್ ಹೊಳೆಯಲ್ಲಿ ತೇಲಾಡಿ 2ನೇ ಸ್ಥಾನಕ್ಕೇರಿದ ಲಕ್ನೋ
ಎಲ್ಲ ತಂಡಗಳು ಕ್ರಿಕೆಟ್ನಲ್ಲಿ ಪ್ಲೇಯಿಂಗ್ ಇಲವೆನ್ನಲ್ಲಿ 11 ಜನರೊಂದಿಗೆ ಕಣಕ್ಕಿಳಿದರೆ, ಮುಂಬೈ ಮಾತ್ರ 13 ಪ್ಲೇಯರ್ಗಳೊಂದಿಗೆ ಕಣಕ್ಕಿಳಿಯುತ್ತೆ. 11 ಜನ ಫೀಲ್ಡಿಂಗ್ ಮಾಡಿದರೆ, ಉಳಿದ ಇಬ್ಬರು ಅಂಪೈರ್ ಮಾಡುತ್ತಾರೆ. ಆದ್ದರಿಂದ ತೀರ್ಪು ಮುಂಬೈ ಪರವಾಗಿಯೇ ಇರುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ.
ನೋಬಾಲ್ ವಿವಾದಗಳು ಇದೇ ಮೊದಲೇನಲ್ಲ:
ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ಹಾಗೂ ರಿಷಭ್ ಪಂತ್ ನಾಯಕತ್ವದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇದೇ ರೀತಿ ನೋಬಾಲ್ ವಿವಾದ ನಡೆದಿತ್ತು. ಆ ನಂತರ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಪೀಲ್ ಮಾಡಿದ ನಂತರ ಅಂಪೈರ್ ನೋಬಾಲ್ ನೀಡಿದ್ದು, ಭಾರೀ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಈ ವರ್ಷ ನಡೆದ ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ನೋಬಾಲ್ ಆಗಿದ್ದರೂ ಶಫಾಲಿ ವರ್ಮಾ ಅವರದ್ದು ಔಟ್ ಎಂದು ತೀರ್ಪು ನೀಡಲಾಗಿತ್ತು.