ಬೆಂಗಳೂರು : ಅಹೋರಾತ್ರಿಯೂ ದ್ರೋಹ ಚಿಂತನೆ, ವಿಶ್ವಾಸದ್ರೋಹ, ಉಂಡ ಮನೆಗೆ ಕನ್ನ, ಸ್ವಪಕ್ಷೀಯರಿಗೇ ಗುನ್ನ, ಇದೂ ಒಂದು ಬದುಕೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಎಕ್ಸ್‌ ಖಾತೆಯ ಮೂಲಕ ಕಿಡಿಕಾರಿದ್ದಾರೆ. ಹನಿಟ್ರ‍್ಯಾಪ್ ವಿಷಯವಾಗಿ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ ಅವರು, ಪರೋಕ್ಷವಾಗಿ ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಮರ್ಯಾದೆಗೇಡಿ, ಕಿಡಿಗೇಡಿ ನನ್ನ ಮೇಲೆ ಮತ್ತೆ ವಿಷ ಕಕ್ಕಿರುವುದು ಹತಾಶೆ ಅಷ್ಟೇ. ಆಕಾಶಕ್ಕೆ ಉಗಿದರೆ ಮುಖದ ಮೇಲೆಯೇ ಬೀಳುತ್ತದೆ ಮಂಕೆ. ಇಷ್ಟೂ ಸಾಮಾನ್ಯಜ್ಞಾನವೂ ಇಲ್ಲವೇ? ಕುಂಬಳಕಾಯಿ ಕಳ್ಳನಿಗೆ ಕೋಪ ಬಂದಿದೆ.

ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿರುವ ವಿಷ ಸರ್ಪ ನನ್ನಡೆಗೆ ನಾಲಿಗೆ ಚಾಚಿದೆ. ಇಂಥ ಕ್ರಿಮಿನಲ್ ಒಬ್ಬ ಕೆಟ್ಟ ಅಲೋಚನೆಗಳಲ್ಲಿ ದಿನಪೂರ್ತಿ ಮುಳುಗಿರುವುದು ಸಹಜ. ಕ್ರಿಮಿನಲ್‌ನ ಚಾಳಿಯೇ ಧಮ್ಕಿ ಹಾಕುವುದು. ವಿಷಕ್ರಿಮಿಯ ಕೆಲಸ ಎಲ್ಲರನ್ನೂ ಕಚ್ಚುವುದು. ಇದರಲ್ಲಿ ನನಗೇನೂ ಅಚ್ಚರಿ ಇಲ್ಲ ಎಂದರು.

ನಾನು ಭೂ ಒತ್ತುವರಿ ಮಾಡಿದ್ದೇನೋ ಇಲ್ಲವೋ ಕಾನೂನು ವ್ಯಾಪ್ತಿಯಲ್ಲಿ ತೀರ್ಮಾನವಾಗುತ್ತದೆ. ಈಗ ನನ್ನ ಮರ್ಯಾದೆ ವಿಷಯ ಇರಲಿ, ಇವತ್ತು ಸ್ವಪಕ್ಷೀಯರೇ ಈ ಮರ್ಯಾದೆಗೇಡಿಯ ಮಾನವನ್ನು ವಿಧಾನಸೌಧದಲ್ಲಿಯೇ ಹರಾಜು ಹಾಕಿದ್ದಾರೆ. ಅದಕ್ಕೆ ಉತ್ತರವೇನು ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *