ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಇಂದು ಮಹತ್ವದ ದಿನವಾಗಿದ್ದು,ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಉಡಾವಣೆಯಾಗಲಿದೆ.

ಬಾಹ್ಯಾಕಾಶ ಉಪಗ್ರಹಗಳ ಡಾಕಿಂಗ್‌ (Docking) ಮತ್ತು ಅನ್‌ಡಾಕಿಂಗ್‌ (Undocking) ಪ್ರಯೋಗ ಯಶಸ್ವಿಯಾದಲ್ಲಿ ಸ್ಪೇಡೆಕ್ಸ್‌ನಲ್ಲಿ ಯಶ ಕಂಡ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗದಲ್ಲಿ ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿದೆ.

ಈ ಪ್ರಯೋಗದ ಭಾಗವಾಗಿ ಎಸ್‌ಡಿಎಕ್ಸ್‌01 ಮತ್ತು ಎಸ್‌ಡಿಎಕ್ಸ್02 ಹೆಸರಿನ ಎರಡು ಉಪಗ್ರಹಗಳನ್ನು ಹೊತ್ತ ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (PSLV) ರಾಕೆಟ್ ಇಂದು ರಾತ್ರಿ 9:58ಕ್ಕೆ ಉಡಾವಣೆಯಾಗಲಿದೆ. ಭೂಮಿಯಿಂದ 476 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್‌ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗ ನಡೆಯಲಿದೆ.

ಏನಿದು ಪ್ರಯೋಗ? – ಈ ಎರಡೂ ಉಪಗ್ರಹಗಳು ತನ್ನಲ್ಲಿರುವ ಸೆನ್ಸರ್‌, ವ್ಯವಸ್ಥೆಯನ್ನು ಬಳಸಿ ಒಂದಕ್ಕೊಂದು ಜೋಡಣೆ ಆಗುವಂತೆ ಮಾಡುವುದು. ನಂತರ ಪರಸ್ಪರ ಬೇರೆಯಾಗುವಂತೆ ಮಾಡಲು ಇಸ್ರೋ ಈ ಪ್ರಯೋಗ ನಡೆಸಲಿದೆ. ಈ ಕಾರಣಕ್ಕೆ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್) ಎಂಬ ಹೆಸರನ್ನು ಇಡಲಾಗಿದೆ.

ಯಾಕೆ ಇಷ್ಟೊಂದು ಮಹತ್ವ? – ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಿ, ವಾಪಸ್‌ ಕರೆತರಲು ಇಸ್ರೋ ಈಗಾಗಲೇ ಯೋಜನೆ ರೂಪಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತೆ ಇಸ್ರೋ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ. ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ತಂತ್ರಜ್ಞಾನ ತಿಳಿದಿರಬೇಕು ಎನ್ನಲಾಗಿದೆ.

Leave a Reply

Your email address will not be published. Required fields are marked *