ಬೆಂಗಳೂರು : ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಸದಾಶಿವ ನಗರದ ಆರ್.ಎಂ.ವಿ 2ನೇ ಹಂತದ ಟೆಂಪಲ್ ರಸ್ತೆಯಲ್ಲಿ ನಡೆದಿದೆ.
ಪತಿ ಅನೂಪ್ (38), ರಾಖಿ(35), ಅನುಪ್ರಿಯಾ (5) ವರ್ಷ ಮತ್ತು ಪ್ರಿಯಾಂಶ್ (2) ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಅನೂಪ್ ಉತ್ತರ ಪ್ರದೇಶ ಮೂಲದವರಾಗಿದ್ದು, ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಮನೆಗೆ ಕೆಲಸವರು ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ರಾತ್ರಿ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ದಂಪತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಈ ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸದಾಶಿವ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅನೂಪ್ ಮನೆಯಲ್ಲಿ ಮೂರು ಜನ ಕೆಲಸ ಮಾಡುತ್ತಿದ್ದರು. ಅನುಪ್ರಿಯಾಗೆ ಆರೋಗ್ಯ ಸಮಸ್ಯೆ ಇತ್ತು. ಈ ವಿಚಾರಕ್ಕೆ ದಂಪತಿ ಬಹಳ ಬೇಸರದಲ್ಲಿದ್ದರು.
ಇಂದು ಬೆಳಗ್ಗೆ 11 ಗಂಟೆಗೆ ಪಾಂಡಿಚೇರಿಗೆ ಹೋಗಲಿದ್ದೇವೆ. ಬೇಗ ಕೆಲಸಕ್ಕೆ ಬನ್ನಿ ಎಂದು ಕೆಲಸದವರಿಗೆ ಅನೂಪ್ ಹೇಳಿದ್ದರು. ಹೀಗಾಗಿ ಇಂದು ಬೆಳಗ್ಗೆ ಕೆಲಸವರು ಮನೆಗೆ ಬಂದಿದ್ದಾರೆ. ನೆನ್ನೆ ಸಹ ಪ್ಯಾಕಿಂಗ್ ಮಾಡಲು ಕೆಲಸದವರನ್ನು ಕರೆಸಿಕೊಂಡಿದ್ದರು. ಮೂವರು ಕೆಲಸಗಾರರ ಪೈಕಿ ಇಬ್ಬರು ಅಡುಗೆಗೆ ನಿಯೋಜನೆಗೊಂಡಿದ್ದರೆ, ಒಬ್ಬರು ಮಗು ನೋಡಿಕೊಳ್ಳಲು ಇದ್ದರು. ಮೂವರಿಗೂ ತಿಂಗಳಿಗೆ 15 ಸಾವಿರ ರೂ. ಸಂಬಳ ನೀಡುತ್ತಿದ್ದರು. ಟೆಕ್ಕಿ ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು.
ಮೊದಲ ಮಗುವಿಗೆ ಮಾನಸಿಕ ತೊಂದರೆ ಇದ್ದ ಕಾರಣ ದಂಪತಿ ಬಹಳ ಕುಗ್ಗಿ ಹೋಗಿದ್ದರು. ನಿನ್ನೆ ರಾತ್ರಿ 10 ಗಂಟೆಯವರೆಗೂ ದಂಪತಿ ಖುಷಿಯಾಗಿಯೇ ಇದ್ದರು ಎಂದು ಕೆಲಸದವರು ತಿಳಿಸಿದ್ದಾರೆ.