ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ ಅದ್ಯಾಕೋ ಮೌನಕ್ಕೆ ಶರಣಾಗಿದೆ. ಮೊದಲ ಟೆಸ್ಟ್ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ವಿರಾಟ್ ಆ ಬಳಿಕ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಶತಕವಿರಲಿ, ಕೊಹ್ಲಿ ಬ್ಯಾಟ್ನಿಂದ ಅರ್ಧಶತಕದ ಇನ್ನಿಂಗ್ಸ್ ಹೊರಬರುವುದು ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾಲ್ಕನೇ ಟೆಸ್ಟ್ಗೆ ಭರ್ಜರಿ ಸಿದ್ಧತೆ ನಡೆಸಿರುವ ಕೊಹ್ಲಿ, ಬಾಕ್ಸಿಂಗ್ ಡೇ ಟೆಸ್ಟ್ ಆರಂಭಕ್ಕೂ ಮುನ್ನ ರವಿಶಾಸ್ತ್ರಿ ಅವರೊಂದಿಗೆ ಮಾತುಕತೆ ನಡೆಸಿದ್ದು, ತನ್ನ ಪ್ರದರ್ಶನದ ಬಗ್ಗೆ, ತಂಡ ತನ್ನ ಮೇಲಿಟ್ಟಿರುವ ನಿರೀಕ್ಷೆಗಳ ಬಗ್ಗೆ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಈ ವೇಳೆ ಕಳೆದ ಕೆಲವು ಇನ್ನಿಂಗ್ಸ್ನಲ್ಲಿ ನಿರೀಕ್ಷಿತ ಪ್ರದರ್ಶನ ಕಂಡುಬರದಿರುವ ಬಗ್ಗೆ ರವಿಶಾಸ್ತ್ರಿ ಕೊಹ್ಲಿ ಬಳಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಕೊಹ್ಲಿ, ‘ಹೌದು, ಕೊನೆಯ ಎರಡು ಮೂರು ಇನ್ನಿಂಗ್ಸ್‌ಗಳು ನಾನು ಬಯಸಿದ ರೀತಿಯಲ್ಲಿ ನಡೆಯಲಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ನಾನು ಶಿಸ್ತುಬದ್ಧವಾಗಿ ಆಡಲಿಲ್ಲ, ಇದು ಟೆಸ್ಟ್ ಕ್ರಿಕೆಟ್ ತರುವ ಸವಾಲು. ನಿಸ್ಸಂಶಯವಾಗಿ ಈ ಪಿಚ್‌ಗಳು ಕಳೆದ ಬಾರಿಗಿಂತ ಈ ಬಾರಿ ಸಾಕಷ್ಟು ಸವಾಲಿನವಾಗಿವೆ. ಹಾಗಾಗಿ ಇಲ್ಲಿ ಬ್ಯಾಟಿಂಗ್‌ಗೆ ವಿಭಿನ್ನ ವಿಧಾನದ ಅಗತ್ಯವಿದೆ. ಆದಾಗ್ಯೂ, ಇಲ್ಲಿನ ವಿಭಿನ್ನ ಸನ್ನಿವೇಶಗಳನ್ನು ಎದುರಿಸಲು ಮತ್ತು ತಂಡದ ನಿರೀಕ್ಷೆಗೆ ತಕ್ಕಂತೆ ಆಡಲು ಮತ್ತು ನನ್ನ ತಂಡಕ್ಕೆ ದೊಡ್ಡ ಕೊಡುಗೆಯನ್ನು ನೀಡಲು ಬಯಸುತ್ತೇನೆ ಎಂದಿದ್ದಾರೆ.
ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ‘ನಿರೀಕ್ಷೆಗಳು ಯಾವಾಗಲೂ ಇರುತ್ತವೆ. ನನ್ನ ಪ್ರಕಾರ ಇಷ್ಟು ದಿನ ದೇಶಕ್ಕಾಗಿ ಆಡಿದ ನಂತರ ಇಷ್ಟು ರನ್ ಗಳಿಸಿದ ನಂತರ, ನಿರೀಕ್ಷೆಗಳು ಯಾವಾಗಲೂ ಇರುತ್ತವೆ. ನಿಮ್ಮ ಯೋಜನೆಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ನೀವು ಇರುವ ಜಾಗವನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ.
ನೀವು ನಿರೀಕ್ಷೆಗಳ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿದರೆ, ಏನು ಮಾಡಬೇಕೆಂಬುದನ್ನು ನೀವು ಮರೆತುಬಿಡುತ್ತೀರಿ. ಹಾಗಾಗಿ ನಾನು ಹೊಂದಿರುವ ಆಟದ ಯೋಜನೆಯನ್ನು ಅನುಸರಿಸುವುದು ಮಾತ್ರ ನನ್ನ ಗುರಿಯಾಗಿದೆ. ಆಡುವ ವಿಧಾನದಲ್ಲಿ ಬಹಳ ಶಿಸ್ತುಬದ್ಧರಾಗಿರುವುದು ಮತ್ತು ಆಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದೇ ನನ್ನನ್ನು ವರ್ಷಗಳಿಂದ ಯಶಸ್ವಿಯಾಗಿ ಉಳಿಯಲು ಕಾರಣವಾಗಿದೆ ಎಂದಿದ್ದಾರೆ.