ಬೆಳಗಾವಿ : ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟಿದ್ದ ಬೆಳಗಾವಿ ಮೂಲದ ನಾಲ್ವರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ.ನಂತೆ 1 ಕೋಟಿ ರೂ. ಪರಿಹಾರವನ್ನು ಉತ್ತರ ಪ್ರದೇಶ ಸರ್ಕಾರ ನೀಡಿದೆ.
ಜ.13 ರಿಂದ ಮಾ.26 ವರೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಜ.29 ರಂದು ಮೌನಿ ಅಮವಾಸ್ಯೆ ಪ್ರಯುಕ್ತ ಪುಣ್ಯಸ್ನಾನದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ಕಾಲ್ತುಳಿತ ದುರಂತದಲ್ಲಿ ಬೆಳಗಾವಿ ಮೂಲದ ನಾಲ್ವರಾದ ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ, ಅರುಣ ಕೋಪರ್ಡೆ, ಮಹಾದೇವಿ ಬಾವನೂರ ಮೃತಪಟ್ಟಿದ್ದರು.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜ.29 ರಂದು ಮೃತರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಪರಿಹಾರ ಘೋಷಿಸಿದಂತೆ ಕಾಲ್ತುಳಿತ ಸಂಭವಿಸಿದ 40 ದಿನಗಳ ಬಳಿಕ ಇಂದು ಪರಿಹಾರ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶ ಸರ್ಕಾರದಿಂದ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಅಕೌಂಟ್‌ಗೆ ಹಣ ಜಮೆಯಾಗಿದೆ.
ಈ ಕುರಿತು ಸ್ವತಃ ಡಿಸಿ ಮಾಹಿತಿ ಹಂಚಿಕೊಂಡಿದ್ದು, ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಪರಿಹಾರ ಮೊತ್ತ ಜಮೆಯಾಗಿದೆ. ನಾಲ್ವರಿಗೆ ತಲಾ 25 ಲಕ್ಷ ರೂ.ಯಂತೆ 1 ಕೋಟಿ ರೂ. ಪರಿಹಾರ ವಿತರಣೆಯಾಗಿದ್ದು, ರಾಜ್ಯ ಸರ್ಕಾರದಿಂದಲೂ ಪರಿಹಾರ ನೀಡುವಂತೆ ಜಿಲ್ಲಾಡಳಿತದಿಂದ ವರದಿ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.