ಮುಂಬೈ : ಸೈಫ್ ಅಲಿ ಖಾನ್ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಕುವಿನಿಂದ ಇರಿತಕ್ಕೆ ಒಳಗಾದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕಳ್ಳ ಮಾಡಿದ ಅವಾಂತರದಿಂದ ಸೈಫ್ ಅಲಿ ಖಾನ್ ಕುಟುಂಬ ಇಷ್ಟೆಲ್ಲ ಸಮಸ್ಯೆ ಎದುರಿಸಬೇಕಾಯಿತು.
ಅವರಿಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಅವರ ಆರೋಗ್ಯದ ಬಗ್ಗೆ ಪದೇ ಪದೇ ಅಪ್ಡೇಟ್ ಕೇಳಲಾಗುತ್ತಿದೆ. ಇದನ್ನು ಕೊಡಲು ಪಾಪರಾಜಿಗಳು ಕೂಡ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಕರೀನಾ ಕಪೂರ್ ಸಿಟ್ಟಾಗಿ, “ನಮ್ಮ ಪಾಡಿಗೆ ನಮ್ಮ ಬಿಟ್ಟು ಬಿಡಿ” ಎಂದು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದು ಹಂಚಿಕೊಂಡಿದ್ದಾರೆ.
ಕರೀನಾ ಕಪೂರ್ ಅವರು ಸದ್ಯಕ್ಕೆ ಟೆನ್ಷನ್ನಲ್ಲಿ ಇದ್ದಾರೆ. ಕುಟುಂಬಕ್ಕೆ ಈ ಪರಿಸ್ಥಿತಿ ಬಂದಿರುವುದರಿಂದ ಅವರು ಸಾಕಷ್ಟು ಆಘಾತದಲ್ಲಿ ಇದ್ದಾರೆ. ಅವರ ಕುಟುಂಬ ಕಷ್ಟದಲ್ಲಿ ಇದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಖಾಸಗಿತನಕ್ಕೆ ಗೌರವ ನೀಡಿ ಎಂದು ಕೋರಿದ್ದಾರೆ. ಆದರೆ, ಇದನ್ನು ಯಾರೂ ಪಾಲಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕರೀನಾ ಮನೆಗೆ ಆಟಿಕೆ ತರುತ್ತಿರುವುದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋನ ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ತೈಮೂರ್ ಹಾಗೂ ಜೇ ಅಲಿಗೆ ಹೊಸ ಆಟಿಕೆ’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿತ್ತು. ಇದು ಕರೀನಾ ಗಮನಕ್ಕೆ ಬಂದಿದೆ.
‘ಇದನ್ನು ಈಗಲೇ ನಿಲ್ಲಿಸಿ. ನಿಮಗೆ ಹೃದಯ ಇದೆಯೇ? ನಮ್ಮನ್ನು ಒಂಟಿಯಾಗಿ ಇರಲು ಬಿಡಿ’ ಎಂದು ಕರೀನಾ ಸಿಟ್ಟಲ್ಲಿ ಬರೆದು, ಇದಕ್ಕೆ ನಮಸ್ಕರಿಸುತ್ತಿರುವ ಎಮೋಜಿ ಕೂಡ ಹಾಕಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಬಳಿಕ ಏನನ್ನಿಸಿತೋ ಏನೋ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.