ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅರ್ಜುನ್ ರಮೇಶ್ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜುನ್ ರಮೇಶ್ ಟಿಕೆಟ್ ಬಯಸಿದ್ದಾರೆ.

Lok Sabha Elections 2024: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ನಟ ಅರ್ಜುನ್ ರಮೇಶ್ ಸ್ಪರ್ಧೆ?

ಹೈಲೈಟ್ಸ್‌:

  • ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಬಯಸಿದ ಅರ್ಜುನ್ ರಮೇಶ್
  • ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿರುವ ಅರ್ಜುನ್ ರಮೇಶ್
  • ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನ ಭೇಟಿ ಮಾಡಿ ಮನವಿ ಮಾಡಿದ ಅರ್ಜುನ್ ರಮೇಶ್

ಲೋಕಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ. 2024ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಚುನಾವಣೆ ಜರುಗಲಿದೆ. ಚುನಾವಣೆಗೆ ಈಗಾಗಲೇ ಪಕ್ಷಗಳು ಪೂರ್ವ ತಯಾರಿ ನಡೆಸುತ್ತಿವೆ. ತಂತ್ರ ಹಾಗೂ ಪ್ರತಿತಂತ್ರಗಳನ್ನು ಪಕ್ಷಗಳು ಹೆಣೆಯುತ್ತಿವೆ. ಯಾವ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಸಿಗಬೇಕು ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ. ಚುನಾವಣಾ ಟಿಕೆಟ್‌ಗಾಗಿ ಕೆಲವರು ಲಾಬಿ ಆರಂಭಿಸಿದ್ದಾರೆ. ಹೀಗಿರುವಾಗಲೇ, ಕನ್ನಡ ನಟ ಅರ್ಜುನ್ ರಮೇಶ್ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ನಟ ಅರ್ಜುನ್ ರಮೇಶ್ ಬಿಜೆಪಿ ಪಕ್ಷದಿಂದ ಟಿಕೆಟ್ ಬಯಸಿದ್ದಾರೆ.

00:03 / 05:49

ರಾಜಕಾರಣಿಗಳು ಮಾತು ತಪ್ಪಿದ್ರೆ ಬಟ್ಟೆ ಹರಿದು ಮಂಗಳಾರತಿ ಮಾಡಬೇಕು: ಬಿಗ್ ಬಾಸ್ ಅರ್ಜುನ್ ರಮೇಶ್

ಮನವಿ ಸಲ್ಲಿಸಿದ ಅರ್ಜುನ್ ರಮೇಶ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ಕಾನೂನು ಮತ್ತು ಸಂಸದೀಯ ಮಂಡಳಿ ಸಚಿವರಾದ ಪ್ರಹ್ಲಾದ್ ಜೋಷಿ ಅವರಲ್ಲಿ ನಟ ಮತ್ತು ಪುರಸಭೆ ಸದಸ್ಯ ಅರ್ಜುನ್ ರಮೇಶ್ ಮನವಿ ಸಲ್ಲಿಸಿದ್ದಾರೆ.

ದೆಹಲಿಯಲ್ಲಿ ಭೇಟಿ ಮಾಡಿದ ಅರ್ಜುನ್ ರಮೇಶ್

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ದೆಹಲಿಯ ನಿವಾಸದಲ್ಲಿ ಅರ್ಜುನ್ ರಮೇಶ್ ಭೇಟಿ ಮಾಡಿದರು. ಈ ವೇಳೆ ಅರ್ಜುನ್ ರಮೇಶ್ ಅವರ ತಂದೆ ಮಾಜಿ ವಿಧಾನಪರಿಷತ್ ಸದಸ್ಯ ಸಿ ರಮೇಶ್ ಕೂಡ ಹಾಜರಿದ್ದರು.

‘’ಈ ಬಾರಿಯ ಚುನಾವಣೆಯಲ್ಲಿ ಯುವಕರಿಗೆ ಅವಕಾಶ ಕಲ್ಪಿಸಿಕೊಡಿ. ಕಳೆದ ಒಂದೂವರೆ ದಶಕದಿಂದ ಯುವ ಮೋರ್ಚಾದ ವಿವಿಧ ಹುದ್ದೆಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದೇನೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿ. ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲಬೇಕು. ಪಕ್ಷ ಸಂಘಟನೆ ಮತ್ತು ಸಮಾಜ ಸೇವೆ ಮಾಡಿದ್ದೇನೆ. ಲೋಕಸಭಾ ಟಿಕೆಟ್‌ಗೆ ನನ್ನನ್ನ ಪರಿಗಣಿಸಿ’’ ಎಂದು ಪ್ರಹ್ಲಾದ್ ಜೋಷಿ ಬಳಿ ಅರ್ಜುನ್ ರಮೇಶ್ ಮನವಿ ಮಾಡಿದ್ದಾರೆ.

ರಾಜಕೀಯ ರಂಗದಲ್ಲಿರುವ ಅರ್ಜುನ್ ರಮೇಶ್

ಅರ್ಜುನ್ ರಮೇಶ್ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷದ ಯುವ ಮುಖಂಡರಾಗಿರುವ ಅರ್ಜುನ್ ರಮೇಶ್ ಟಿ ನರಸೀಪುರದ ಪುರಸಭೆ ಸದಸ್ಯರಾಗಿದ್ದಾರೆ. ಸಾಮಾಜಿಕ ಕಳಕಳಿ ಹೊಂದಿರುವ ಅರ್ಜುನ್ ರಮೇಶ್ ತಮ್ಮ ಕ್ಷೇತ್ರದ ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ, ಪೌರ ಕಾರ್ಮಿಕರಿಗೆ ಊಟ ಸೇರಿದಂತೆ ಅನೇಕ ಸಮಾಜಮುಖಿ ಕೆಲಸಗಳನ್ನು ಕೈಗೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಅರ್ಜುನ್ ರಮೇಶ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅರ್ಜುನ್ ರಮೇಶ್‌ಗೆ ಟಿಕೆಟ್ ಮಿಸ್ ಆಗಿತ್ತು. ಇದೀಗ ಸಂಸದರಾಗಲು ಅರ್ಜುನ್ ರಮೇಶ್ ಒಲವು ತೋರಿದ್ದಾರೆ.

ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಮಿಂಚಿರುವ ಅರ್ಜುನ್ ರಮೇಶ್

ಪ್ರಜ್ವಲ್ ದೇವರಾಜ್ ನಟನೆಯ ‘ಜೆಂಟಲ್‌ ಮ್ಯಾನ್’ ಚಿತ್ರದಲ್ಲಿ ಅರ್ಜುನ್ ರಮೇಶ್ ನಟಿಸಿದ್ದರು. ‘ಕೌಟಿಲ್ಯ’ ಸಿನಿಮಾದಲ್ಲಿ ಅರ್ಜುನ್ ರಮೇಶ್ ನಾಯಕರಾಗಿದ್ದರು. ಕನ್ನಡ ಕಿರುತೆರೆಯ ‘ಇಂತಿ ನಿಮ್ಮ ಆಶಾ’, ‘ಅಗ್ನಿಸಾಕ್ಷಿ’, ‘ನಾಗಿಣಿ’ ಸೀರಿಯಲ್‌ಗಳಲ್ಲಿ ಅರ್ಜುನ್ ರಮೇಶ್ ಅಭಿನಯಿಸಿದ್ದರು. ‘ಮಹಾಕಾಳಿ’ ಹಾಗೂ ‘ಶನಿ’ ಸೀರಿಯಲ್‌ಗಳಲ್ಲಿ ಅರ್ಜುನ್ ರಮೇಶ್ ಶಿವನ ಪಾತ್ರ ಮಾಡಿದ್ದರು.

‘ಬಿಗ್ ಬಾಸ್’ ಸ್ಪರ್ಧಿ

‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ಅರ್ಜುನ್ ರಮೇಶ್ ಸ್ಪರ್ಧಿಸಿದ್ದರು. ಪ್ರಬಲ ಸ್ಪರ್ಧಿಯಾಗಿದ್ದ ಅರ್ಜುನ್ ರಮೇಶ್ ತಮ್ಮ ಭುಜಕ್ಕೆ ಏಟು ಮಾಡಿಕೊಂಡ ಪರಿಣಾಮ ‘ಬಿಗ್ ಬಾಸ್’ ಮನೆಯಿಂದ ಹೊರಬಂದರು.

Leave a Reply

Your email address will not be published. Required fields are marked *