ಮಂಡ್ಯ : 3 ದಿನಗಳ ಹಿಂದೆ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆಯಾಗಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ. ಕೆ.ಆರ್.ಪೇಟೆ ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಪುತ್ರ ಶಶಾಂಕ್(28) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿ ಆಗಿದ್ದ ಶಶಾಂಕ್. ಜಾರ್ಖಂಡ್ ಮೂಲದ ಅಷ್ಣಾರ ಎಂಬ ಯುವತಿಯನ್ನು ಪ್ರೀತಿ ಮಾಡುತ್ತಿದ್ದರು. ಈ ವಿಚಾರವನ್ನು ಮನೆಯವರಿಗೆಲ್ಲಾ ತಿಳಿಸಿ, ಒಪ್ಪಿಗೆ ಪಡೆದು ಮಾ.2ರಂದು ಮೈಸೂರಿನ ರೆಸಾರ್ಟ್ವೊಂದರಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು.
ಮದುವೆ ದಿನವೂ ಶಶಾಂಕ್ ಸ್ವಲ್ಪ ಜ್ವರ ಇದೆ ಎಂದು ಸ್ನೇಹಿತರೊಂದಿಗೆ ಹೇಳಿಕೊಂಡಿದ್ದರು. ನೆನ್ನೆ ಶಶಾಂಕ್‌ಗೆ ಬೆಂಗಳೂರಿನ ನಿವಾಸದಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಆತನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಶಶಾಂಕ್ ಪತ್ನಿ, ತಂದೆ-ತಾಯಿ, ಸ್ನೇಹಿತರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.