ಬೆಳಗಾವಿ : ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತದ ಹಿಂದೆ ಡಿಕೆ ಶಿವಕುಮಾರ್, ಡಿ.ಕೆ.ಸುರೇಶ್, ಕುಸುಮಾ ಕೈವಾಡ ಇದೆ ಎಂಬ ಆರೋಪಕ್ಕೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಮುನಿರತ್ನ ತಾವೇ ಹಲ್ಲೆ ಮಾಡಿಸಿಕೊಂಡಿರಬಹುದು, ಬಿಜೆಪಿ ಡ್ರಾಮಾ ಕಂಪನಿ ರೀತಿ ವರ್ತನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರು ಬಾಯಿಗೆ ಬಂದ ಹಾಗೆ ಆರೋಪ ಮಾಡುತ್ತಿದ್ದಾರೆ. ಸಿ.ಟಿ.ರವಿ, ಮುನಿರತ್ನ ಪ್ರಕರಣದಲ್ಲಿ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಕಪೋಕಲ್ಪಿತ ಮಾತುಗಳನ್ನು ಸೇರಿಸುವುದು ಯಾವ ನ್ಯಾಯ? ಪಾಪ, ಕುಸುಮಾ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದು ಸರಿಯಲ್ಲ. ಉಪ್ಪು ತಿಂದವರು ನೀರು ಕುಡಿಯಬೇಕೆಂಬ ಸ್ಥಿತಿ ಮುನಿರತ್ನಗೆ ಬಂದಿದೆ. ಕರುಣೆ ಬರುವ ರೀತಿ ಸನ್ನಿವೇಶ ಸೃಷ್ಟಿ ಮಾಡುವ ಕಲಾವಿದರು ಈ ಮುನಿರತ್ನ, ನಿಜಾಂಶ ಜನರಿಗೆ ಗೊತ್ತಿದೆ ಎಂದರು.