ಕಲಬುರಗಿ : ಅಮೆರಿಕದಿಂದ ಗಡಿಪಾರು ಮಾಡಲಾದ ಭಾರತೀಯ ವಲಸಿಗರೊಂದಿಗೆ ಅಮೆರಿಕ ಅಮಾನವೀಯವಾಗಿ ನಡೆದುಕೊಂಡ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಹಳೆಯ ಸ್ನೇಹಿತ’ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿ, ಭಾರತೀಯರನ್ನು ಈ ರೀತಿ ವಾಪಸ್ ಕಳುಹಿಸಬೇಡಿ ಎಂದು ಹೇಳಬೇಕಿತ್ತು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. “ಮೋದಿಗೆ ಆರಂಭದಲ್ಲಿ ಅಮೆರಿಕಕ್ಕೆ ಆಹ್ವಾನ ಬಂದಿರಲಿಲ್ಲ. ಆದರೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕಕ್ಕೆ ಹೋಗಿ ವ್ಯವಸ್ಥೆ ಮಾಡಿದ್ದಾರೆ. ಅನಂತರವೇ ಮೋದಿಗೆ ಆಹ್ವಾನ ಬಂದಿದೆ ಎಂದು ಖರ್ಗೆ ಹೇಳಿದರು.
ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಾರೆ. ಸ್ನೇಹಿತನಾಗಿದ್ದರೆ ಭಾರತೀಯರನ್ನು ಸರಕು ಸಾಗಿಸುವ ವಿಮಾನದಲ್ಲಿ ಕಳುಹಿಸುತ್ತಿರಲಿಲ್ಲ. ಅವರಿಗೆ ಕೊನೆಯ ಪಕ್ಷ ನಾಗರಿಕ ವಿಮಾನವನ್ನು ಮಾಡಿಕೊಡಬೇಕಿತ್ತು ಅಥವಾ ನಮ್ಮ ವಿಮಾನವು ಅಲ್ಲಿಗೆ ತಲುಪುವವರೆಗೂ ಕಾಯಬೇಕಿತ್ತು ಎಂದರು.
ಭಾರತೀಯ ವಲಸಿಗರನ್ನು ಸರಕು ವಿಮಾನದಲ್ಲಿ ಭಾರತಕ್ಕೆ ಮರಳಿ ಕರೆತಂದು “ಕಸಕ್ಕಿಂತ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ” ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ವಾಗ್ದಾಳಿ ನಡೆಸಿದರು.
ಈ ವಲಸಿಗರನ್ನು ಪ್ರಯಾಣಿಕ ವಿಮಾನದಲ್ಲಿ ಕಳುಹಿಸುವಂತೆ ಮೋದಿ ಟ್ರಂಪ್ ಅವರಿಗೆ ಹೇಳಲಿಲ್ಲ ಅಥವಾ ಭಾರತದಿಂದ ವಿಮಾನದ ವ್ಯವಸ್ಥೆ ಮಾಡಲಿಲ್ಲ. ಇದು ಅವರು ಆಪ್ತ ಸ್ನೇಹಿತ ಎಂದು ಹೇಳುತ್ತಿರುವುದು ಸುಳ್ಳು ಎಂದು ಸಾಬೀತುಪಡಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ಮೋದಿಯವರಿಗೆ ಸುಳ್ಳು ಹೇಳುವ ಛಾಳಿ ಇದೆ. ಟ್ರಂಪ್ ಈಗಾಗಲೇ ಹೆದರಿಸುತ್ತಿದ್ದಾರೆ. ಅವರಿಂದ ನಮ್ಮ ದೇಶಕ್ಕೆ ಒಳ್ಳೆಯದಾಗುತ್ತೆ ಅಂತ ಹೇಗೆ ಹೇಳೋದು? ನಮ್ಮ ಎಂಜಿನಿಯರ್‌ಗಳು, ವೈದ್ಯರು ಹಾಗೂ ಕಂಪ್ಯೂಟರ್ ತಜ್ಞರಿಗೆ ನಿರ್ಬಂಧ ಹೇರುತ್ತಾರೆ” ಎಂದು ಹೇಳಿದರು.