ಬೆಂಗಳೂರು : ಬಸ್ ದರ ಏರಿಕೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ನನ್ನ ಮತ್ತು​ ಪೊಲೀಸರ ಮಧ್ಯೆ ನಡೆದಿದ್ದು, ವಾಗ್ವಾದದ ವಿಡಿಯೋವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕಟ್ ಮಾಡಿ, ಎಡಿಟ್ ಮಾಡಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದರ ವಿರುದ್ಧ ದೂರು ನೀಡಿದೆ, ಕಾನೂನು ಹೋರಾಟ ನಡೆಸುತ್ತೇನೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಈ ಸಂಬಂಧಂತೆ ಬೆಂಗಳೂರಿನ ಪಶ್ಚಿಮ ವಿಭಾಗದ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ ಉಪ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅಶೋಕ ಅವರು, ನಾನು ಯಾವುದೇ ಆಕ್ಷೇಪಾರ್ಹ ಪದವನ್ನು ಹೇಳಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂವಹನ ಅಧ್ಯಕ್ಷ ರಮೇಶ್ ಬಾಬು, ಸಹ ಅಧ್ಯಕ್ಷೆ ಐಶ್ವರ್ಯ ಮಹದೇವ್, ಉಪಾಧ್ಯಕ್ಷ ಇ.ಸತ್ಯಪ್ರಕಾಶ್​, ಕೆಪಿಸಿಸಿ ಸಾಮಾಜಿಕ ‌ಮಾಧ್ಯಮ ಸಹ ಅಧ್ಯಕ್ಷ ವಿಜಯ್ ಮತ್ತಿಕಟ್ಟಿ ಮತ್ತು ನಿಕೇತ್ ರಾಜ್ ಮೌರ್ಯ ವಿರುದ್ಧ ಆರ್‌.ಅಶೋಕ್ ಅವರು ದೂರು ನೀಡಿದ್ದು, ಎಫ್​ಐಆರ್​ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ನಾನು ಪ್ರತಿಪಕ್ಷದ ನಾಯಕನಾಗಿ ಇತರ ಬಿಜೆಪಿ ನಾಯಕರೊಂದಿಗೆ ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಿ, ಬಸ್ ಟಿಕೆಟ್ ದರ ಏರಿಕೆ ಕುರಿತು ಮಾಹಿತಿ ನೀಡುತ್ತಿದ್ದೆ. ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮಕೈಗೊಂಡಿಲ್ಲ ಎಂದು ತಿಳಿಸಲಾಗುತ್ತಿತ್ತು. ಈ ವೇಳೆ ಕೆಲ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರನ್ನು ಭೇಟಿಯಾಗದಂತೆ ತಡೆಯಲು ಯತ್ನಿಸಿದರು. ಈ ಸಮಯದಲ್ಲಿ ಸಾರ್ವಜನಿಕರಿಗೆ ಪ್ರಸ್ತುತ ವ್ಯವಹಾರಗಳ ಬಗ್ಗೆ ಮತ್ತು ಕರ್ನಾಟಕ ಸರ್ಕಾರ ಕೈಗೊಂಡ ನಿರ್ಧಾರಗಳ ಬಗ್ಗೆ ಸಂವಹನ ನಡೆಸುವಾಗ ನನ್ನೊಂದಿಗೆ ಹಸ್ತಕ್ಷೇಪ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೆ.

ಇದಕ್ಕೆ ಪ್ರತಿಯಾಗಿ, ಪೊಲೀಸರು ನನ್ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅವರು ಯಾವುದೇ ಕಾನೂನಿನ ಅಧಿಕಾರವಿಲ್ಲದೆ ನನ್ನನ್ನು ತಡೆಯಲು ಪ್ರಯತ್ನಿಸಿದರು. ಆ ಸಮಯದಲ್ಲಿ, ನಾನು ಕರ್ನಾಟಕದ ವಿರೋಧ ಪಕ್ಷದ ನಾಯಕನಾಗಿದ್ದೇನೆ ಮತ್ತು ಸಾರ್ವಜನಿಕರಿಗೆ ಮಾಹಿತಿಯನ್ನು ತಿಳಿಸುವಾಗ ನನ್ನೊಂದಿಗೆ ಹಸ್ತಕ್ಷೇಪ ಮಾಡಬಾರದು ಮತ್ತು ಇದು ನನ್ನ ಸಾಂವಿಧಾನಿಕ ಹಕ್ಕು ಎಂದು ನಾನು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದೆ.

ಈ ಸನ್ನಿವೇಶದಲ್ಲಿ ನಾನು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಿದ್ದೇನೆ. ಆದರೆ, ಕಾಂಗ್ರೆಸ್​ ಅಧಿಕೃತ ಎಕ್ಸ್​ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಈ ವಿಡಿಯೋದಿಂದ ನಾನು ಆಘಾತಕ್ಕೊಳಗಾಗಿದ್ದೇನೆ, ನಕಲಿ ಎಡಿಟ್​ ವಿಡಿಯೋವನ್ನು ಹರಿಬಿಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನ ಪ್ರತಿಯನ್ನು ಆಶೋಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *