ಅನೇಕಲ್ : ತಾಯಿಯನ್ನು ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಚಂದಾಪುರದಲ್ಲಿ ನಡೆದಿದೆ.
ಮಹಾಲಕ್ಷ್ಮಿ (41) ಕೊಲೆಯಾದ ಮಹಿಳೆ. ರಮೇಶ್ (21) ತಾಯಿಯನ್ನ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಮಗ ಎಂದು ಗುರತಿಸಲಾಗಿದೆ. ಚಿತ್ರದುರ್ಗ ಮೂಲದ ಚಳ್ಳಕೆರೆಯ ಚಿಕ್ಕಹಳ್ಳಿ ಕುಟುಂಬ, ಕಳೆದ ಕೆಲ ವರ್ಷಗಳ ಹಿಂದೆ ಕೆಲಸಕ್ಕಾಗಿ ಬಂದಿದ್ದರು.
ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಗ ಕುಡಿದು ಬಂದು ಆಗಾಗ್ಗೆ ಗಲಾಟೆ ಮಾಡುತ್ತಿದ್ದನು. ನಿನ್ನೆ ರಾತ್ರಿಯೂ ಕುಡಿದು ಬಂದು ತಾಯಿ ಮಹಾಲಕ್ಷ್ಮಿ ಜೊತೆ ಗಲಾಟೆ ಮಾಡಿದ್ದ. ಗಲಾಟೆ ವಿಕೋಪಕ್ಕೆ ತಿರುಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೊಬೈಲ್ ಚಾರ್ಜಿಂಗ್ ವೈರ್‌ನಿಂದ ಕುತ್ತಿಗೆಗೆ ಬಿಗಿದು ತಾಯಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಈ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಮತ್ತು ಬೆಂಗಳೂರು ಗ್ರಾಮಾಂತರ ಎಎಸ್‌ಪಿ ನಾಗೇಶ್ ಕುಮಾರ್ ಭೇಟಿ ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ಅತ್ತಿಬೆಲೆ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.