ನವದೆಹಲಿ : ದಕ್ಷಿಣ ಕನ್ನಡದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ನವದೆಹಲಿಯಲ್ಲಿ ಇಂದು ಇಎಸ್‌ಐಸಿ ಪ್ರಧಾನ ಕಚೇರಿಯ ಮಹಾ ನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ಮಂಗಳೂರಿನ ಇಎಸ್‌ಐಸಿ ಆಸ್ಪತ್ರೆ ಎದುರಿಸುತ್ತಿರುವ ಮೂಲಸೌಕರ್ಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ.

ಕ್ಯಾ.ಚೌಟ ಅವರು ಇತ್ತೀಚೆಗೆ ಮಂಗಳೂರಿನ ಇಎಸ್‌ಐಸಿ ಆಸ್ಪತ್ರೆಗೆ ಧಿಡೀರ್ ಭೇಟಿ ನೀಡಿದ್ದಾಗ ಅಲ್ಲಿ ದೂರದ ಊರುಗಳಿಂದ ಚಿಕಿತ್ಸೆಗೆ ಬಂದ ರೋಗಿಗಳು ಸರ್ವರ್ ಸಮಸ್ಯೆ ಸೇರಿದಂತೆ ಹಲವು ರೀತಿ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿತ್ತು. ಇಎಸ್‌ಐಸಿ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಕ್ಯಾ. ಚೌಟ ಅವರು ಅದಕ್ಕೆ ಶಾಶ್ವತ ಪರಿಹಾರ ಒದಗಿಸುವ ಹಿನ್ನಲೆಯಲ್ಲಿ ಅಶೋಕ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಇಎಸ್‌ಐಸಿ ಆಸ್ಪತ್ರೆಯಲ್ಲಿ ಅರ್ಹರಿಗೆ ಲಭಿಸುವ ಸೌಲಭ್ಯಗಳಿಗೆ ಸಂಬಂಧಿಸಿದ ಎದುರಿಸುತ್ತಿರುವ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದಾರೆ.

ಕೆಲವು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲದಿರುವ ವಿಷಯದ ಬಗ್ಗೆಯೂ ಈ ವೇಳೆ ಚರ್ಚಿಸಲಾಯಿತು. 10ಕ್ಕಿಂತ ಹೆಚ್ಚು ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ಯಾವುದೇ ಕಂಪನಿಯು ಇಎಸ್‌ಐಸಿ ಅಡಿಯಲ್ಲಿ ನೋಂದಾಯಿಸುವುದು ಕಡ್ಡಾಯ ಎಂದು ಡಿಜಿ ಸಿಂಗ್ ಇದೇ ವೇಳೆ ತಿಳಿಸಿದ್ದಾರೆ.

ಇಎಸ್‌ಐಸಿ ಪ್ರಸ್ತುತ ಸೌಲಭ್ಯಗಳನ್ನು ಪಡೆಯುವುದಕ್ಕೆ ಗುತ್ತಿಗೆ ಕಾರ್ಮಿಕರೂ ಅರ್ಹರಾಗಿದ್ದಾರೆ. ಆದರೆ, ಮಂಗಳೂರಿನ ಕೆಲವು ಪಿಎಸ್ಯುಗಳಲ್ಲಿನ ಗುತ್ತಿಗೆ ಕಾರ್ಮಿಕರಿಗೂ ಇಎಸ್‌ಐಸಿ ವೈದ್ಯಕೀಯ ಸೌಲಭ್ಯ ನಿರಾಕರಿಸುತ್ತಿರುವುದು ಹಾಗೂ ಪ್ರಸ್ತುತ 21,000 ರೂ. ವೇತನದ ಮಿತಿಗಿಂತ ಹೆಚ್ಚು ಗಳಿಸುವ ಕಾರ್ಮಿಕರನ್ನು ಕೂಡ ಇಎಸ್‌ಐಸಿ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಲು ಅರ್ಹರನ್ನಾಗಿ ಮಾಡುವ ಅಗತ್ಯತೆ ಬಗ್ಗೆಯೂ ಕ್ಯಾ.ಚೌಟ ಇಎಸ್‌ಐಸಿ ಡಿಜಿಯೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.

Leave a Reply

Your email address will not be published. Required fields are marked *