ಬೆಂಗಳೂರು : ʼಆ್ಯಸಿಡ್ ಮೊಟ್ಟೆʼ ದಾಳಿ ಪ್ರಕರಣ ಪೂರ್ವ ನಿಯೋಜಿತವಾಗಿದ್ದು, ಶಾಸಕ ಮುನಿರತ್ನ ಅಭಿನಯದ ‘ಆ್ಯಸಿಡ್ ಮೊಟ್ಟೆ’ ಸಿನಿಮಾ 100 ದಿನ ಓಡಿಸಿ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕಿಡಿಕಾರಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಈ ವಿಡಿಯೋ ಪ್ರಕರಣ ಹಾಗೂ ಮಾಧ್ಯಮದ ವರದಿಗಳನ್ನು ನೋಡಿದಾಗ ಬಿಜೆಪಿ ಶಾಸಕರು, ನನ್ನ ಮೇಲೆ, ನನ್ನ ಸಹೋದರ ಹಾಗೂ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ ಹಾಗೂ ಅವರ ತಂದೆ ವಿರುದ್ಧ ನೇರ ಆರೋಪ ಮಾಡಿದ್ದಾರೆ.
ಈ ವಿಡಿಯೋ ಅತ್ಯುತ್ತಮವಾಗಿ ಮೂಡಿ ಬಂದಿದೆ. ಆ್ಯಸಿಡ್ ದಾಳಿ ಎಂದ ಮೂರು ಸೆಕೆಂಡ್ ನಲ್ಲಿ ಮೊಟ್ಟೆ ಎಸೆಯಲಾಗಿದೆ. ಕನ್ನಡ ಚಿತ್ರರಂಗದ ಅಧ್ಯಕ್ಷ, ನಿರ್ಮಾಪಕರು, ಚಿತ್ರಕಥೆ ತಿರುಚುವ ಕೆಲಸ ಮಾಡಿದ್ದ ಮುನಿರತ್ನ, ಈಗ ತಾವೇ ನಟನೆಗೂ ಇಳಿದಿದ್ದಾರೆ ಎಂದು ಈ ವಿಡಿಯೋ ನೋಡಿದ ಮೇಲೆ ನನಗೆ ತಿಳಿಯಿತು. ಅದಕ್ಕಾಗಿ ಒಳ್ಳೆ ಡ್ರಾಮಾ ಮಾಡಿ ಮಾಧ್ಯಮಗಳ ಕೈಗೆ ನೀಡಿದ್ದಾರೆ. ಮಾಧ್ಯಮಗಳು ಕೂಡ ಏನೂ ಸುದ್ದಿ ಇಲ್ಲ ಎಂದು ಇದನ್ನು ಚೆನ್ನಾಗಿ ಬಿತ್ತರಿಸಿದ್ದೀರಿ. ಅಭಿನಯ ಮಾಡಿದ ಅವರಿಗೂ ಅಭಿನಂದನೆ, ಅದನ್ನು ತೋರಿಸಿದ ನಿಮಗೂ ಅಭಿನಂದನೆಗಳು ಎಂದು ವಾಗ್ದಾಳಿ ನಡೆಸಿದರು.
ಈ ವಿಚಾರವಾಗಿ ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಅವರು ಅನೇಕ ಸಿನೆಮಾ ಮಾಡಿದ್ದು, ಕೆಲವು ಡಬ್ಬಾ ಯಶಸ್ವಿಯಾದರೆ, ಮತ್ತೆ ಕೆಲವು ಯಶಸ್ವಿಯಾಗಿಲ್ಲ. ಹೀಗಾಗಿ ಹೊಸ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಮೊದಲು ಮಾಧ್ಯಮಗಳನ್ನು ಬಳಸಿಕೊಂಡು ಮಾರುಕಟ್ಟೆ ಇದ್ದರೆ ನಂತರ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ನೀಡಲಿ. ಅವರು ಗೃಹಮಂತ್ರಿಗೆ ಪತ್ರ ಬರೆದು ಎಸ್ ಪಿಜಿ ಭದ್ರತೆಯನ್ನೇ ಪಡೆಯಲಿ. ಕಾರಣ ಅವರ ಬಳಿ ರಘು ಎಂಬ ಚಾಲಕ ಇದ್ದ. ಅವನು ಏನಾದ ಎಂದು ತಿಳಿಯಬೇಕಲ್ಲವೇ. ಉಳಿದ ವಿಚಾರಗಳನ್ನು ಮಾಧ್ಯಮಗಳೇ ತನಿಖೆ ಮಾಡಿ ಪ್ರಸಾರ ಮಾಡಿ. ಮತ್ತೊಬ್ಬ ಮಳ್ಳತಹಳ್ಳಿ ರಂಜಿತ್ ಎಂಬ ಹುಡುಗನ ಕೈ ಕಾಲು ಮುರಿದಿದ್ದಾರೆ.
ಇಷ್ಟು ದಿನ ಅವರ ಖಾಸಗಿ ವಿಚಾರ ಮಾತನಾಡಬಾರದು ಎಂದು ಸುಮ್ಮನೆ ಇದ್ದೆ. ಈ ಪ್ರಕರಣಗಳನ್ನು ಸಿಬಿಐ ತನಿಖೆಯಾಗಲಿ ಎಂದು ಪತ್ರ ಬರೆಯಲಿ. ಅವರ ಹೈಕಮಾಂಡ್ ಗೆ ಕೊಟ್ಟಿರುವ ವರದಿಯಲ್ಲಿ ಇದನ್ನು ಸೇರಿಸಲಿ.ಮತದಾರರ ನಕಲಿ ಗುರುತಿನ ಚೀಟಿ ಪ್ರಕರಣದಲ್ಲಿ ಬಾಲಾಜಿ ಎಂಬುವವರು ತಿರುಪತಿ ಲಡ್ಡು ತೆಗೆದುಕೊಂಡು ಹೋಗಿ ಕೊಟ್ಟರಂತೆ. ಇದರ ಮೇಲೂ ಸಿಬಿಐ ತನಿಖೆಯಾಗಲಿ ಎಂದು ಹೇಳಿದರು.