ಹುಬ್ಬಳ್ಳಿ : ಆಕಾಶ್​ ವಾಲ್ಮೀಕಿ (24) ಕೊಲೆ ಪ್ರಕರಣದ ಮೂವರು ಆರೋಪಿಗಳ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಆತ್ಮರಕ್ಷಣೆಗೆ ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​ ಶ್ರೀಮಂತ ಹುಣಸಿಕಟ್ಟಿ ಮತ್ತು ಕಮರಿಪೇಟೆ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​ ಸುನೀಲ್​ ಅವರು ​ಆರೋಪಿಗಳಾದ ಅಭಿಷೇಕ್, ವಿನೋದ್, ಯಲ್ಲಪ್ಪ ಕಾಲಿಗೆ ಗುಂಡು ಹೊಡೆದಿದ್ದಾರೆ.

ತಡರಾತ್ರಿ ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ಆಕಾಶ್ ಕೊಲೆಯಾಗಿತ್ತು. ಈ ಕೊಲೆಯಲ್ಲಿ ಭಾಗಿಯಾಗಿರುವ ಮೂವರನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದರು. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು 9 ಸುತ್ತು ಗುಂಡು ಹಾರಿಸಿದರು. 4 ಸುತ್ತು ಗಾಳಿಯಲ್ಲಿ, 5 ಸುತ್ತು ಗುಂಡುಗಳನ್ನು ಆರೋಪಿಗಳ ಕಾಲಿಗೆ ಹೊಡೆದರು. ಬಳಿಕ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಘಟನೆಯಲ್ಲಿ ಇನ್ಸ್​ಪೆಕ್ಟರ್​ಗಳಾದ ಶ್ರೀಮಂತ ಹುಣಸಿಕಟ್ಟಿ, ಸುನೀಲ್ ಮತ್ತು ಪೇದೆಗಳಾದ ಮುತ್ತು ಲಮಾಣಿ, ಶರಣಗೌಡ ಲಮಾಣಿ ಎಂಬುವರಿಗೆ ಗಾಯವಾಗಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಆಕಾಶ್ ಕೊಲೆ ಹಿಂದೆ ಹಳೇ ದ್ವೇಷ, ಹವಾ ಸೃಷ್ಟಿ ಮಾಡುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ಇರುವ ಗೋಲ್ಡನ್ ಹೈಟ್ಸ್ ಬಾರ್​ ಪಾರ್ಕಿಂಗ್ ಜಾಗದಲ್ಲಿ ಆಕಾಶ್​ನನ್ನು ಆರೋಪಿಗಳು ಕೊಲೆ ಮಾಡಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣ ಸಂಬಂಧ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮಾತನಾಡಿ, ಆಕಾಶ್​ನನ್ನು ಕೊಲೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಐದಕ್ಕೂ ಹೆಚ್ಚು ಜನರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದೇವೆ. ಕಳೆದ ವರ್ಷ ಶಿವರಾತ್ರಿ ದಿನ ಗಲಾಟೆಯಾಗಿತ್ತು. ಈ ವಿಷಯ ಇಟ್ಟುಕೊಂಡು, ಹವಾ ಸೃಷ್ಡಿ ಮಾಡಲು ಕೊಲೆ ಮಾಡಿದ್ದಾರೆ. ಬಹಳ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಹೇಳಿದರು.

ಈ ಘಟನೆಯಲ್ಲಿ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ ನೀಡಿ, ಗಾಯಾಳ ಆರೋಗ್ಯ ವಿಚಾರಿಸಿದರು. ನಂತರ ಗುಂಡೇಟು ತಿಂದ ಆರೋಪಿಗಳ ಆರೋಗ್ಯ ವಿಚಾರಿಸಿದರು.

Leave a Reply

Your email address will not be published. Required fields are marked *