ಚಿಕ್ಕಬಳ್ಳಾಪುರ: ಮನೆಯಲ್ಲಿದ್ದ ಒಂಟಿ ಮಹಿಳೆಯ ಕತ್ತು ಕೊಯ್ದು ಬಂಗಾರದ ಸರವನ್ನು ಕದ್ದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಕೇವಲ ನಾಲ್ಕು ದಿನಗಳಲ್ಲಿ ಬಂಧಿಸಿರುವ ಘಟನೆಗೆ ಸಂಬಂಧಿಸಿದಂತೆ ಇಂದು ಎಸ್ಪಿ ಕುಶಾಲ್ ಚೌಕ್ಸೆ ಚಿಂತಾಮಣಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾಹಿಯನ್ನು ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮದಲ್ಲಿ ನಡೆದ ಒಂಟಿ ಮಹಿಳೆಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. 67 ವರ್ಷ ವಯಸ್ಸಿನ ಲಲಿತಮ್ಮ ಎಂಬುವವರು ಕೈವಾರ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ವಾಸವಾಗಿದ್ದು, ದಿನಾಂಕ: 05-08-2024 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 01 ಗಂಟೆಯ ನಡುವೆ ಕತ್ತು ಕೊಯ್ದು ಬಂಗಾರದ ಸರವನ್ನು ಕಳವು ಮಾಡಿ ಯಾರೋ ಅಪರಿಚಿತರು ಈಕೆಯನ್ನು ಹತ್ಯೆ ಮಾಡಿದ್ದರು.
ಈ ಘಟನೆ ಸ್ಥಳೀಯರಲ್ಲಿ ಭಯದ ವಾತಾವರಣವನ್ನು ಉಂಟುಮಾಡಿದ್ದು, ಪ್ರಕರಣವನ್ನು ಶೀಘ್ರ ಪತ್ತೆಹಚ್ಚಲು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರಾಜಾ ಇಮಾಮ್ ಖಾಸಿಮ್ ರವರ ಮಾರ್ಗದರ್ಶನದಲ್ಲಿ ವಿಶೇಷ ಪತ್ತೆ ತಂಡವನ್ನು ರಚನೆ ಮಾಡಿದ್ದು ಆರೋಪಿಗಾಗಿ ಬಲೆ ಬೀಸಿದ್ದರು.
ಅದರಂತೆ ತಂಡವು ತಕ್ಷಣವೇ ಕಾರ್ಯಪ್ರವೃತ್ತಿಯಾಗಿ, ಕೃತ್ಯ ನಡೆದ ಸ್ಥಳದ ಪರಿಶೀಲನೆ ಹಾಗೂ ಮೃತಳ ಸಂಬಂಧಿಕರು ಮತ್ತು ಸ್ಥಳೀಯರನ್ನು ವಿಚಾರಣೆ ನಡೆಸಿ, ಎಲ್ಲಾ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿ, ತಾಂತ್ರಿಕ ಹಾಗೂ ವೈಜ್ಞಾನಿಕ ತನಿಖಾ ವಿಧಾನಗಳನ್ನು ಬಳಸಿಕೊಂಡು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಶಿಡ್ಲಘಟ್ಟ ತಾಲೂಕಿನ ತುಮ್ಮನಹಳ್ಳಿ ಗ್ರಾಮ ಟಿ.ಎಸ್ ದೇವರಾಜ (30) ಎಂದು ತಿಳಿದು ಬಂದಿದೆ. ದೂರದ ಸಂಬಂಧಿಯಾಗಿದ್ದ ದೇವರಾಜ್ ಹಲವು ಬಾರೀ ಲಲಿತಮ್ಮ ಮನೆಗೆ ಭೇಟಿ ನೀಡಿದ್ದ ಆದರೆ ಸರಿಯಾದ ಸಮಯನ್ನು ನೋಡಿಕೊಂಡು ಯಾರು ಇಲ್ಲದೆ ವೇಳೆ ಮನೆಗೆ ನುಗ್ಗಿ ಮುದುಕಿಯ ಕತ್ತಿನಲ್ಲಿದ್ದ ಸರವನ್ನು ಕದ್ದು ಎಸ್ಕೇಪ್ ಆಗಿದ್ದಾನೆ.
ಸದ್ಯ ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ, 03 ಲಕ್ಷ ರೂ. ಮೌಲ್ಯದ ಬಂಗಾರದ ಸರ, ಸರ ಮಾರಾಟ ಮಾಡಿದ್ದ ಹಣ 90 ಸಾವಿರ ರೂ.ಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣವನ್ನು ಕೇವಲ ನಾಲ್ಕು ದಿನಗಳಲ್ಲಿ ಪತ್ತೆಮಾಡಿದ ವಿಶೇಷ ತಂಡಕ್ಕೆ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅವರಿಗೆ ಪ್ರಶಂಸೆ ಪತ್ರವನ್ನು ಕೊಟ್ಟು ಗೌರವಿಸಿದ್ದಾರೆ.