ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಸಕ್ತ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ಮೊದಲ ಪಂದ್ಯ ಆಡಲು ಸಜ್ಜಾಗುತ್ತಿದೆ. ಗುಜರಾತ್​ ಟೈಟನ್ಸ್ ವಿರುದ್ಧ ಇಂದು ನಡೆಯಲಿರುವ ಪಂದ್ಯಾವಳಿಯ ಪ್ರಯುಕ್ತ ನಮ್ಮ ಮೆಟ್ರೋ ಕೂಡ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಮೆಟ್ರೋ ಕಾರ್ಯಾಚರಣೆ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಈ ಬಗ್ಗೆ ಬಿಎಂಆರ್​​ಸಿಎಲ್ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ಮಾಹಿತಿ ನೀಡಿದೆ.

ಕ್ರಿಕೆಟ್ ಪ್ರೇಮಿಗಳಿಗೆ ಶುಭಸುದ್ದಿ- ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2025 ಪಂದ್ಯಗಳಿಗೆ ಮೆಟ್ರೋ ಸೇವೆಯನ್ನು ತಡ ರಾತ್ರಿ 12.30ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಪ್ರಕಟನೆಯನ್ನು ಪರಿಶೀಲಿಸಿ ಎಂದು ಎಕ್ಸ್​​ ಸಂದೇಶದಲ್ಲಿ ಬಿಎಂಆರ್​ಸಿಎಲ್ ಉಲ್ಲೇಖಿಸಿದೆ.

ಬೆಂಗಳೂರಿನಲ್ಲಿ ನಡೆಯಲಿರುವ ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಗಳ ವೀಕ್ಷಣೆಗಾಗಿ, ನಮ್ಮ ಮೆಟ್ರೋ ದಿನಾಂಕ 02, 10, 18, ಹಾಗೂ 24ನೇ ಏಪ್ರಿಲ್ ಮತ್ತು 03, 13 ಹಾಗೂ 17ನೇ ಮೇ, 2025 ರಂದು ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ ವೈಟ್‌ಫೀಲ್ಡ್, ಚಲ್ಲಘಟ್ಟ ರೇಷ್ಮೆ ಸಂಸ್ಥೆ ಮತ್ತು ಮಾದವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆಯನ್ನು ರಾತ್ರಿ 12.30ರ ವರೆಗೆ ವಿಸ್ತರಿಸಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 01.15 ಕ್ಕೆ ಹೊರಡಲಿದೆ ಎಂದು ಬಿಎಂಆರ್​ಸಿಎಲ್ ಪ್ರಕಟಣೆ ತಿಳಿಸಿದೆ.

ಐಪಿಎಲ್ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿರುವ ಆರ್​ಸಿಬಿ ಇಂದು ತವರಿನಲ್ಲಿ ಗುಜರಾತ್ ಟೈಟನ್ಸ್​ ಅನ್ನು ಎದುರಿಸಲಿದೆ. ಪಂದ್ಯ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಇದ್ದಾರೆ. ಈ ಸಂದರ್ಭದಲ್ಲಿ, ಸಂಚಾರ ದಟ್ಟಣೆ ತಡೆಯುವುದಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರೂ ಸಾರ್ವಜನಿಕರಲ್ಲಿ, ಕ್ರಿಕೆಟ್​​ ಪ್ರೇಮಿಗಳಲ್ಲಿ ಮನವಿ ಮಾಡಿದ್ದಾರೆ. ಇದೀಗ ಮೆಟ್ರೋ ರೈಲು ಸಮಯ ವಿಸ್ತರಣೆ ಆಗಿರುವುದರಿಂದ ಕ್ರಿಕೆಟ್ ಪ್ರಿಯರಿಗೆ ಅನುಕೂಲವಾಗಲಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ (ಬುಧವಾರ) ಇಂದು ರಾತ್ರಿ 7:30 ಕ್ಕೆ ಆರಂಭವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಆರ್‌ಸಿಬಿ ಆಟಗಾರರರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು, ಪಂದ್ಯಕ್ಕೆ ಸಿದ್ಧತೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *