ಬೆಂಗಳೂರು : ಕರ್ನಾಟಕ ಹಾಲು ಒಕ್ಕೂಟ ಮತ್ತೆ ನಂದಿನಿ ಹಾಲಿನ ದರ ಪರಿಷ್ಕರಣೆಗೆ ಮುಂದಾಗಿದ್ದು, ಹೊಸ ವರ್ಷದಿಂದ ಪ್ರತೀ ಲೀಟರ್ ಹಾಲಿನ ದರದಲ್ಲಿ 5 ರೂಪಾಯಿ ಏರಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ.

ಆರು ತಿಂಗಳ ಹಿಂದಷ್ಟೇ ಕರ್ನಾಟಕದಲ್ಲಿ ನಂದಿನಿ ಹಾಲಿನ ಪ್ರಮಾಣ ಮತ್ತು ದರ ಏರಿಕೆಯಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಗೆ ಕೆಎಂಎಫ್ ಮುಂದಾಗಿದೆ. ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ. ಏರಿಸುವ ಕುರಿತು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಎಲ್‌. ಭೀಮಾನಾಯ್ಕ ಅವರು ಮುನ್ಸೂಚನೆ ನೀಡಿದ್ದಾರೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಹೋಗಿದ್ದು, ಸರ್ಕಾರದ ಹಂತದಲ್ಲಿ ದರ ಏರಿಕೆ ಕುರಿತಾಗಿ ತೀರ್ಮಾನ ಕೈಗೊಳ್ಳಬೇಕು ಎನ್ನುವ ಅಭಿಪ್ರಾಯವನ್ನು ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ ಹೇಳಿದ್ದಾರೆ.

‘ಹಾಲು ಉತ್ಪಾದಕ ರೈತರು ತೀವ್ರ ಸಂಕಷ್ಟದಲ್ಲಿರುವುದನ್ನು ಸಿಎಂ ಸಿದ್ದರಾಮಯ್ಯನವರು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ರೈತರಿಗೆ ಕನಿಷ್ಠ 5 ರೂ.ನಷ್ಟು ಹಾಲಿನ ದರ ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಲಿದ್ದಾರೆ. ಸಿಎಂ ಶೀಘ್ರದಲ್ಲೇ ರಾಜ್ಯದ ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು, ಹಾಲು ಉತ್ಪಾದಕ ರೈತರಹಿತ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ‘ದಕ್ಷಿಣ ಭಾರತದ ಇತರೆ ರಾಜ್ಯಗಳು ಮತ್ತು ಅಮುಲ್‌ ಹಾಲಿಗೆ ಹೋಲಿಸಿದರೆ ಕರ್ನಾಟಕದ ನಂದಿನಿ ಹಾಲಿನದರ ಕಡಿಮೆಯೇ ಇದೆ. ದರ ಏರಿಕೆ ಮಾಡಿದ ನಂತರವೂ ನಮ್ಮ ರಾಜ್ಯದ ಹಾಲಿನ ಬೆಲೆಯು ಲೀಟರ್‌ ಗೆ ಇತರೆ ರಾಜ್ಯಗಳಿಗಿಂತ 14 ರೂ. ಕಡಿಮೆ ಇದೆ. ಗುಣಮಟ್ಟದ ಹಾಲನ್ನೂ ಕರ್ನಾಟಕ ಹಾಲು ಮಹಾಮಂಡಳ ನೀಡುತ್ತಿದೆ ಎಂದು ಆರು ತಿಂಗಳ ದರ ಏರಿಕೆ ಮಾಡಿದಾಗ ಭೀಮಾನಾಯ್ಕ ಹೇಳಿದ್ದರು.

ಇದೇ ವೇಳೆ ಈ ಹಿಂದೆ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ 50 ಎಂಎಲ್ ಹೆಚ್ಚುವರಿ ಹಾಲನ್ನು ಕಡಿತ ಮಾಡಿ ಅದರ ದರವನ್ನೂ ಕೂಡ 2 ರೂನಷ್ಟು ಇಳಿಕೆ ಮಾಡಲಾಗುತ್ತದೆ ಎಂದು ಭೀಮಾನಾಯ್ಕ್ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಕೆಎಂಎಫ್‌ಗೆ ಹೆಚ್ಚಿನ ಹಾಲು ಹರಿದು ಬಂದಿದ್ದ ಹಿನ್ನೆಲೆಯಲ್ಲಿ ಪ್ಯಾಕೆಟ್‌ನಲ್ಲಿ ನೀಡಲಾಗುತ್ತಿದ್ದ ಹಾಲಿನ ಪ್ರಮಾಣವನ್ನು 50 ಎಂಎಲ್‌ ಹೆಚ್ಚಿಸಿ ದರವನ್ನೂ 2 ರೂ. ಏರಿಕೆ ಮಾಡಲಾಗಿತ್ತು. ಇದೀಗ ಹಾಲಿನ ಜೊತೆ ದರವನ್ನೂ ಹಿಂಪಡೆಯುವುದಾಗಿ ಭೀಮಾನಾಯ್ಕ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *